ಶುಕ್ರವಾರ ಜ್ಞಾನವಾಪಿ ‘‘ಶಿವಲಿಂಗ’’ದ ಪರೀಕ್ಷೆ ಪ್ರಶ್ನಿಸುವ ಅರ್ಜಿಯ ತುರ್ತು ವಿಚಾರಣೆ
ಹೊಸದಿಲ್ಲಿ, ಮೇ 18: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ‘‘ಶಿವಲಿಂಗ’’ದ ಪ್ರಾಯವನ್ನು ಕಾರ್ಬನ್ ಡೇಟಿಂಗ್ ಮೂಲಕ ನಿರ್ಧರಿಸಲು ಅಲಹಾಬಾದ್ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತುರ್ತು ವಿಚಾರಣೆಯನ್ನು ಶುಕ್ರವಾರ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿದೆ.
ಮಸೀದಿಯ ಉಸ್ತುವಾರಿ ಹೊತ್ತಿರುವ ಅಂಜುಮಾನ್ ಇಂತೆಝಾಮಿಯ ಮಸೀದಿ ವಾರಣಾಸಿ ಪರವಾಗಿ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಎದುರು ಹಾಜರಾದ ಹಿರಿಯ ವಕೀಲ ಹುಝೇಫ ಅಹ್ಮದಿ, ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಎತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೈಕೋರ್ಟ್ ಆದೇಶವು ಸೋಮವಾರ ಜಾರಿಗೆ ಬರುವುದು ಎಂದು ಅಹ್ಮದಿ ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ಅರ್ಜಿಯ ವಿಚಾರಣೆಯನ್ನು ರಜಾಕಾಲದ ಪೀಠವೊಂದು ಮೇ 22ರಂದು ನಡೆಸಬಹುದು ಎಂಬುದಾಗಿ ನ್ಯಾಯಾಲಯವು ಮೊದಲು ಸೂಚಿಸಿತು. ರಜಾಕಾಲದ ಪೀಠದಲ್ಲಿ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಇರುತ್ತಾರೆ ಎಂದು ಮುಖ್ಯ ನ್ಯಾಯಾಧೀಶ ಹೇಳಿದರು. ಪ್ರಕರಣದ ವಿಚಾರಣೆಯನ್ನು ಮೊದಲು ಮಾಡಿರುವ ನಿಯಮಿತ ಪೀಠದಲ್ಲಿಯೂ ನ್ಯಾ. ನರಸಿಂಹ ಇದ್ದಾರೆ.
ವಿವಾದಾಸ್ಪದ ವಸ್ತುವನ್ನು, ಕಾರ್ಬನ್ ಡೇಟಿಂಗ್ ಸೇರಿದಂತೆ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಾಣಸಿಯ ಜಿಲ್ಲಾ ನ್ಯಾಯಾಲಯವು ಕಳೆದ ವರ್ಷದ ಅಕ್ಟೋಬರ್ 14ರಂದು ತಿರಸ್ಕರಿಸಿತ್ತು. ಆದರೆ, ಜಿಲ್ಲಾ ನ್ಯಾಯಾಲಯದ ಆ ಆದೇಶವನ್ನು ಹೈಕೋರ್ಟ್ ಇತ್ತೀಚೆಗೆ ರದ್ದುಪಡಿಸಿತ್ತು.
‘‘ಶಿವಲಿಂಗ’’ವೆಂದು ಹೇಳಲಾಗುವ ವಸ್ತುವಿಗೆ ಯಾವುದೇ ಹಾನಿ ಮಾಡಬಾರದು ಎಂದು ಹೈಕೋರ್ಟ್ ಅಧಿಕಾರಿಗಳಿಗೆ ಆದೇಶ ನೀಡಿತ್ತು. ಆ ವಸ್ತು ‘ವಝು ಖಾನ’ದಲ್ಲಿರುವ ಕಾರಂಜಿಯೊಂದರ ಭಾಗವಾಗಿದೆ ಎಂದು ಮಸೀದಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.