×
Ad

ಶಿಕ್ಷಕನಿಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಉ.ಪ್ರ. ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2023-05-18 21:57 IST

ಲಕ್ನೋ, ಮೇ 18: ಶಹಜಾನ್ಪುರ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಕಂಪ್ಯೂಟರ್ ಶಿಕ್ಷಕನೊಬ್ಬ 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವು ಬುಧವಾರ ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಗಳನ್ನು ನೀಡಿದೆ.

ಘಟನೆಯ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಆಯೋಗವು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸೂಚಿಸಿದೆ. ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ತೆಗೆದುಕೊಳ್ಳಲಾಗಿರುವ ಕ್ರಮಗಳು ಮತ್ತು ತನಿಖೆಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡುವಂತೆಯೂ ಆಯೋಗ ನಿರ್ದೇಶಿಸಿದೆ.

12-16 ವರ್ಷದ ಬಾಲಕಿಯರ ಮೇಲೆ ಕಂಪ್ಯೂಟರ್ ಶಿಕ್ಷಕನು ನಡೆಸಿದನೆನ್ನಲಾದ ದೌರ್ಜನ್ಯ ಕುರಿತ ಮಾಧ್ಯಮ ವರದಿಗಳನ್ನು ನೋಡಿ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಬಾಲಕಿಯರು ತಮ್ಮ ಹೆತ್ತವರೊಂದಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ.

ಶಿಕ್ಷಕನನ್ನು ಬಂಧಿಸಲಾಗಿದೆ ಹಾಗೂ ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವುದಕ್ಕಾಗಿ ಶಾಲೆಯ ಪ್ರಾಂಶುಪಾಲ ಮತ್ತು ಓರ್ವ ಸಹಾಯಕ ಶಿಕ್ಷಕನನ್ನು ಶಿಕ್ಷಣ ಇಲಾಖೆಯು ಅಮಾನತುಗೊಳಿಸಿದೆ.

Similar News