ಮಹಾರಾಷ್ಟ್ರದಲ್ಲಿ ಸಾಮಾಜಿಕ ಸಾಮರಸ್ಯ ನಾಶ ಮಾಡಲು ಬಿಜೆಪಿ ಪ್ರಯತ್ನ: ಸಂಜಯ್ ರಾವತ್

Update: 2023-05-18 17:15 GMT

ಮುಂಬೈ, ಮೇ 18: ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ನಾಶ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಶಿವಸೇನೆ (ಉದ್ಧವ್ ಬಾಳಾ ಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವುತ್ ಅವರು ಬುಧವಾರ ಹೇಳಿದ್ದಾರೆ. ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ದೇವಾಲಯಕ್ಕೆ ಮುಸ್ಲಿಮರ ಗುಂಪೊಂದು  ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ರಾಜ್ಯ ಸರಕಾರ ಮಂಗಳವಾರ ವಿಶೇಷ ತನಿಖಾ ತಂಡ ರೂಪಿಸಿದ ಬಳಿಕ ಸಂಜಯ್ ರಾವತ್ ಅವರು ಈ ಹೇಳಿಕೆ ನೀಡಿದ್ದಾರೆ.

 ಮೇ 13ರಂದು ಮುಸ್ಲಿಮರ ಗುಂಪೊಂದು ಶಿವನಿಗೆ ಚಾದರ ಅರ್ಪಿಸಲು ಪ್ರಯತ್ನಿಸಿದೆ  ಎಂದು ಆರೋಪಿಸಿ ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. 
ದೇವಾಲಯದ ಪ್ರವೇಶದ್ವಾರದಲ್ಲಿ ಧೂಪ ದ್ರವ್ಯ ಅರ್ಪಿಸುವ ದಶಕಗಳಷ್ಟು ಹಳೆಯ ಆಚರಣೆಯನ್ನು ಮಾತ್ರ ನಾವು ಅನುಸರಿಸಿದ್ದೇವೆ   ಎಂದು ಮುಸ್ಲಿಂ ಸಮುದಾಯದ ನಾಯಕರು ಪ್ರತಿಪಾದಿಸಿದ್ದಾರೆ. ಆದರೆ, ಅಂತಹ ಸಂಪ್ರದಾಯ ಅಸ್ತಿತ್ವದಲ್ಲಿ ಇಲ್ಲ ಎಂದು ದೇವಾಲಯ ಆಡಳಿತ ಮಂಡಳಿ ಪ್ರತಿಪಾದಿಸಿದೆ.  
‘‘ಸೂಫಿ ಸಂತ ಗುಲಾಬ್ ಶಾಹ್ ಸಂದಲ್ ಅವರ ಭಕ್ತರು ತಮ್ಮ ಮೆರವಣಿಗೆ ಹಾದು ಹೋಗುತ್ತಿರುವ ಸಂದರ್ಭ ತ್ರಯಂಬಕೇಶ್ವರ ದೇವಾಲಯದ ಮೆಟ್ಟಿಲಲ್ಲಿ ಧೂಪ ದ್ರವ್ಯ ಅರ್ಪಿಸುವುದು 100 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ’’ ಎಂದು ರಾವತ್ ಬುಧವಾರ ತಿಳಿಸಿದ್ದಾರೆ. 

ಸಾಮಾಜಿಕ ಸಾಮರಸ್ಯದ ಇಂತಹ ಸಂಪ್ರದಾಯ ದೇಶಾದ್ಯಂತ ಸಾಮಾನ್ಯ. ಆದರೆ, ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಮಹಾರಾಷ್ಟ್ರದಲ್ಲಿ ಸಾಮಾಜಿಕ ಸೌಹಾರ್ದವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. 

Similar News