×
Ad

ಉಡುಪಿ ನಗರಸಭೆಯಿಂದ 3 ದಿನಕ್ಕೊಮ್ಮೆ ನೀರು: ಸಮಸ್ಯೆ ಇದ್ದಲ್ಲಿ ನೀರು ಪೂರೈಕೆಗೆ 12 ಟ್ಯಾಂಕರ್ ಗಳ ವ್ಯವಸ್ಥೆ

Update: 2023-05-19 22:51 IST

ಉಡುಪಿ: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಿಭಾಗವಾರು ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಇಂದಿನಿಂದ ಆರಂಭಿಸಲಾಗಿದೆ.

ಬಜೆ ಡ್ಯಾಂನಲ್ಲಿ ಇಂದು ನೀರಿನ ಸಂಗ್ರಹ 2.98 ಮೀಟರ್ ಇದ್ದು, ನದಿಯ ಎರಡು ಹೊಂಡಗಳಲ್ಲಿರುವ ನೀರನ್ನು ಪಂಪಿಂಗ್ ಮೂಲಕ ಬಜೆ ಡ್ಯಾಂಗೆ ಹರಿಸುವ ಕಾರ್ಯ ಮುಂದುವರೆದಿದೆ. ಸದ್ಯ ಈ ನೀರನ್ನು ರೇಷನ್ ಮೂಲಕ ನೀಡಿದರೆ ಮುಂದಿನ 20 ದಿನಗಳ ವರೆಗೆ ಬಳಸಬಹುದಾಗಿದೆ ಎಂಬುದು ಅಧಿಕಾರಿಗಳ ಲೆಕ್ಕಚಾರ.

ನೀರು ಸರಬರಾಜು ಮಾಡುವ ದಿನ ಕೆಲವೊಂದು ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗದೇ ಇದ್ದಲ್ಲಿ ಅಲ್ಲಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲು ನಗರಸಭೆ ಕ್ರಮ ತೆಗೆದುಕೊಂಡಿದೆ. ನಿನ್ನೆ ಮತ್ತು ಇವತ್ತು ದೂರು ಬಂದ ಕಡೆಗಳಿಗೆ ತಲಾ ಮೂರು ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಿದ್ದೇವೆ ಎಂದು ಪೌರಾಯುಕ್ತರು ತಿಳಿಸಿದರು.

ನಾಳೆಗೆ 12 ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಸಮಸ್ಯೆ ಇರುವ ನಗರಸಭೆಯ ಎಲ್ಲ ವಾರ್ಡ್ಗಳಿಗೂ ನೀರು ಪೂರೈಸಲು ಕ್ರಮ ತೆಗೆದು ಕೊಳ್ಳಲಾಗಿದೆ. ಈ ಸಂಬಂಧ ಕುಡಿಯುವ ನೀರಿನ ಯಾವುದೇ ಸಮಸ್ಯೆ ಆಗದಂತೆ ನಗರಸಭೆ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡ ಲಾಗಿದೆ ಎಂದು ಅವರು ತಿಳಿಸಿದ್ದಾರೆ.

Similar News