ದೇಶ ಕಟ್ಟಿದವರಿಗೆ ಅವಮಾನ: ಸಾವರ್ಕರ್‌ ಜನ್ಮದಿನದಂದು ನೂತನ ಸಂಸತ್‌ ಉದ್ಘಾಟನೆಗೆ ವಿಪಕ್ಷಗಳು ಕಿಡಿ

Update: 2023-05-20 08:50 GMT

ಹೊಸದಿಲ್ಲಿ: ದೇಶದ ಹೊಸ ಸಂಸತ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮೇ 28ರಂದು ಉದ್ಘಾಟಿಸಲಿದ್ದಾರೆಂಬ ಮಾಹಿತಿ ಹಾಗೂ ಆ ದಿನ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಅವರ ಜನ್ಮದಿನವೆಂದು ತಿಳಿಯುತ್ತಲೇ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದು ಸಂಸತ್‌ ಕಟ್ಟಡವನ್ನು ಆ ದಿನ ಉದ್ಘಾಟಿಸಲು ನಿರ್ಧರಿಸಿರುವ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಸಂಸತ್‌ ಕಟ್ಟಡವನ್ನು ಪ್ರಧಾನಿಯೇಕೆ ಉದ್ಘಾಟಿಸಬೇಕು, ರಾಷ್ಟ್ರಪತಿಗಳೇಕೆ ಉದ್ಘಾಟಿಸುತ್ತಿಲ್ಲ ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ.

ಟಿಎಂಸಿ ಸಂಸದ ಸುಖೇಂದು ಶೇಖರ್‌ ರೇ ಟ್ವೀಟ್‌ ಮಾಡಿ, ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ವೇಳೆ ಈ ಉದ್ಘಾಟನೆ ಸೂಕ್ತವಾಗಿದೆಯಾದರೂ ಸಂವಿಧಾನವನ್ನು 1949ರಲ್ಲಿ ಅಂಗೀಕರಿಸಿದ ದಿನವಾದ ನವೆಂಬರ್‌ 26ರಂದು ಉದ್ಘಾಟಿಸಿದ್ದರೆ ಅತ್ಯಂತ ಸೂಕ್ತವಾಗುತ್ತಿತ್ತು ಎಂದಿದ್ದಾರೆ.

ಆದರೆ ಅದನ್ನು ಮೇ 28ರಂದು ಸಾವರ್ಕರ್‌ ಜನ್ಮದಿನದಂದು ಮಾಡಲಾಗುತ್ತಿದೆ. ಇದೆಷ್ಟು ಸರಿ?” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಸಂಸದ ಜೈರಾಂ ರಮೇಶ್‌, “ನಮ್ಮ ದೇಶದ ಸ್ಥಾಪಕರಿಗೆಲ್ಲಾ ಸಂಪೂರ್ಣ ಅವಮಾನ. ಗಾಂಧಿ, ನೆಹರು, ಪಟೇಲ್‌, ಬೋಸ್‌, ಅಂಬೇಡ್ಕರ್‌ ಎಲ್ಲರ ಅವಗಣನೆ,” ಎಂದು ಬರೆದಿದ್ದಾರೆ.

ಜಪಾನ್‌ನಲ್ಲಿ ಪ್ರಧಾನಿ ಮೋದಿ ಅವರು ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿರುವುದನ್ನು ಉಲ್ಲೇಖಿಸಿದ ಜೈರಾಂ ರಮೇಶ್‌ “ಹಿರೋಶಿಮಾದಲ್ಲಿ ಗಾಂಧೀಜಿ ಅವರ ಪ್ರತಿಮೆ ಅನಾವರಣ ಹಾಗೂ 8 ದಿನಗಳ ನಂತರ ದೇಶದಲ್ಲಿ ಸಂಸತ್‌ ಕಟ್ಟಡವನ್ನು ಗಾಂಧೀಜಿ ಅವರನ್ನು ಜೀವನಪೂರ್ತಿ ವಿರೋಧಿಸಿದ್ದ ಹಾಗೂ ಮಹಾತ್ಮ ಅವರ ಹತ್ಯೆಗೈದ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದ ವ್ಯಕ್ತಿಯ ಜನ್ಮದಿನದಂದು ಉದ್ಘಾಟಿಸಲಿದ್ದಾರೆ. “ ಎಂದು ರಮೇಶ್‌ ಬರೆದಿದ್ದಾರೆ.

ಸಾವರ್ಕರ್‌ ಜನ್ಮದಿನಾಚರಣೆಯಂದು ನೂತನ ಸಂಸತ್‌ ಕಟ್ಟಡ ಉದ್ಘಾಟನೆ ಎಂದು ಸರಕಾರ ಅಧಿಕೃತವಾಗಿ ಹೇಳಿಲ್ಲವಾದರೂ ಬಿಜೆಪಿ ಐಟಿ ಘಟಕ ಮುಖ್ಯಸ್ಥ ಅಮಿತ್‌ ಮಾಲವಿಯಾ ಅವರು ಶುಕ್ರವಾರ ಟ್ವೀಟ್‌ ಮಾಡಿ “ಪ್ರಧಾನಿ ಮೋದಿ ಅವರು ಮೇ 28ರಂದು ಸಂಸತ್‌ ಕಟ್ಟಡ ಉದ್ಘಾಟಿಸಲಿದ್ದಾರೆ. ಇದು ವಿನಾಯಕ್‌ ದಾಮೋದರ್‌ ಸಾವರ್ಕರ, ಭಾರತದ ಮಹಾನ್‌ ಸುಪುತ್ರ ಅವರ 140ನೇ ಜನ್ಮದಿನವೂ ಹೌದು,” ಎಂದು ಬರೆದಿದ್ದಾರೆ.

ಪ್ರಧಾನಿಯೇಕೆ ಸಂಸತ್‌ ಕಟ್ಟಡ ಉದ್ಘಾಟಿಸಬೇಕು ಎಂದು ಎಐಎಂಐಎಂ ಸಂಸದ ಅಸದುದ್ದೀನ್‌ ಉವೈಸಿ ಪ್ರಶ್ನಿಸಿದ್ದಾರೆ.

“ಮಾನ್ಯ ಲೋಕಸಭಾ ಸ್ಪೀಕರ್‌  ಅಥವಾ ರಾಜ್ಯಸಭಾ ಸಭಾಪತಿ ಉದ್ಘಾಟಿಸಬಹುದಾಗಿತ್ತು. ಅದು ಸಾವರ್ಜನಿಕ ಹಣದಿಂದ ನಿರ್ಮಿಸಲಾಗಿದೆ.  ತಮ್ಮ ಸ್ನೇಹಿತರು ಅವರ ಖಾಸಗಿ ನಿಧಿಯಿಂದ ಪ್ರವರ್ತಿಸಿದಂತೆ ಅವರೇಕೆ ವರ್ತಿಸುತ್ತಿದ್ದಾರೆ?” ಎಂದು ಉವೈಸಿ ಪ್ರಶ್ನಿಸಿದ್ದಾರೆ.

Similar News