×
Ad

ನೀವು ತುಂಬಾ ಜನಪ್ರಿಯ: ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಜೋ ಬೈಡನ್‌

Update: 2023-05-21 12:12 IST

ಹೊಸದಿಲ್ಲಿ: ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು, "ನೀವು ನನಗೆ ನಿಜವಾದ ಸಮಸ್ಯೆಯನ್ನುಂಟು ಮಾಡುತ್ತಿದ್ದೀರಿ. ಮುಂದಿನ ತಿಂಗಳು ನಾವು ನಿಮಗೆ ವಾಷಿಂಗ್ಟನ್‌ನಲ್ಲಿ ಔತಣ ಕೂಟ ಏರ್ಪಡಿಸಿದ್ದೇವೆ. ಇಡೀ ಅಮೆರಿಕಾದ ಜನತೆ ಅದರಲ್ಲಿ ಪಾಲ್ಗೊಳ್ಳಲು ಬಯಸುತ್ತಿದ್ದಾರೆ. ನನ್ನ ಬಳಿ ಟಿಕೆಟ್‌ಗಳ ಕೊರತೆ ಉಂಟಾಗಿದೆ. ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಭಾವಿಸುತ್ತಿದ್ದೀರಾ? ಬೇಕಿದ್ದರೆ ನನ್ನ ತಂಡವನ್ನು ಕೇಳಿ. ಸಿನಿಮಾ ತಾರೆಯರಿಂದ ಹಿಡಿದು ಸಂಬಂಧಿಕರವರೆಗೆ ನಾನು ಫೋನ್ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ನೀವು ತುಂಬಾ ಜನಪ್ರಿಯ" ಎಂದು ಹಾಸ್ಯಮಿಶ್ರಿತ ಧಾಟಿಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಶನಿವಾರ ಟೋಕಿಯೋದಲ್ಲಿ ನಡೆದ ಕ್ವಾಡ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನುದ್ದೇಶಿ ಮಾತನಾಡಿರುವ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಇಬ್ಬರೂ ಪ್ರಧಾನಿ ನರೇಂದ್ರ ಅವರಿಗೆ ತಾವಿಬ್ಬರೂ ಎದುರಿಸುತ್ತಿರುವ ಸವಾಲನ್ನು ತಿಳಿಸಿದ್ದು, ತಮ್ಮ ದೇಶಗಳ ಗಣ್ಯ ನಾಗರಿಕರು ಪ್ರಧಾನಿ ನರೇಂದ್ರ ಮೋದಿ ಭಾಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾತರರಾಗಿದ್ದಾರೆ ಎಂಬ ಸಂಗತಿಯನ್ನು ಅವರೆದುರು ಬಯಲುಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ "ನಾನು ನಿಮ್ಮ ಹಸ್ತಾಕ್ಷರ ಪಡೆಯಬೇಕು" ಎಂದು ತಮಾಷೆ ಮಾಡಿರುವ ಜೋ ಬೈಡನ್, "ಮಾನ್ಯ ಪ್ರಧಾನ ಮಂತ್ರಿಗಳೇ ನೀವು ಕ್ವಾಡ್ ಸೇರಿದಂತೆ ಎಲ್ಲದರ ಮೇಲೂ ಗಮನಾರ್ಹ ಪರಿಣಾಮವನ್ನುಂಟು ಮಾಡಿದ್ದೀರಿ. ನೀವು ವಾತಾವರಣದಲ್ಲಿ ಮೂಲಭೂತ ಬದಲಾವಣೆಯನ್ನೂ ತಂದಿದ್ದೀರಿ. ಇಂಡೊ ಪೆಸಿಫಿಕ್ ಪ್ರದೇಶದಲ್ಲಿ ನಿಮ್ಮ ಪ್ರಭಾವವಿದೆ. ನೀವೊಂದು ಪರಿವರ್ತನೆ ತರುತ್ತಿದ್ದೀರಿ" ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಟೋಕಿಯೋದಲ್ಲಿ ಆಯೋಜನೆಗೊಂಡಿರುವ ಕ್ವಾಡ್ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿಯವರು ಪಪುವಾ ನ್ಯೂ ಗಿನಿಯಾಗೆ ತೆರಳಲಿದ್ದಾರೆ. ನಂತರ ಆಸ್ಟ್ರೇಲಿಯಾಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸಗಳನ್ನು ಭಾರತೀಯ ಸಂಸ್ಕೃತಿಯ ಪ್ರಸರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ.

Similar News