ಉ.ಕ ಜಿಲ್ಲಾದ್ಯಂತ ಹೆಚ್ಚುತ್ತಿರುವ ಮಾಂಕಾಳ್ ವೈದ್ಯರಿಗೆ ‘ಮಂತ್ರಿಗಿರಿ’ ಬೇಡಿಕೆ: ಸಿದ್ದು ಸರ್ಕಾರದ ಗಮನಕ್ಕೆ ಬಂದೀತೆ?

Update: 2023-05-21 16:28 GMT

ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ್ ವೈದ್ಯರ ಭರ್ಜರಿ ಗೆಲುವಿನ ನಂತರ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಾ ಇದೆ. ಫಲಿತಾಂಶ ಪ್ರಕಟಗೊಂಡ ದಿನವೇ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ರಾಜಕೀಯ ಸಮಿತಿ ಸಂಚಾಲಕ ಇಮ್ರಾನ್ ಲಂಕಾ ವೈದ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು.

ಶನಿವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಮೀನುಗಾರರ ಮುಖಂಡರು ಮಾಂಕಾಳ್ ವೈದ್ಯರಿಗೆ ಮೀನುಗಾರಿಕೆ ಮತ್ತು ಬಂದರ್ ಇಲಾಖೆ ಸಚಿವರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟಿದ್ದಾರೆ.

ಈ ಕುರಿತಂತೆ ಮಾತನಾಡಿದ ಭಟ್ಕಳ ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಶಾಸಕ ಮಾಂಕಾಳ್ ವೈದ್ಯರಿಗೆ ಕರಾವಳಿ ಪ್ರದೇಶ ಮತ್ತು ಮೀನುಗಾರರ ಸಮಸ್ಯೆ ಕುರಿತು ಸಂಪೂರ್ಣ ಅರಿವಿದೆ. ಸ್ವತಃ ಮೀನುಗಾರರ ಸಮುದಾಯದವರಾಗಿದ್ದರಿಂದ ಮೀನುಗಾರಿಕೆ ಅಭಿವೃದ್ಧಿ ಪಡಿಸಲು ಸಮರ್ಥ ವ್ಯಕ್ತಿಯಾಗಿದ್ದಾರೆ ಎಂದರು. ಮೀನುಗಾರರ ರಾಷ್ಟ್ರೀಯ ಮಂಡಳಿಯ ಮಾಜಿ ಉಪಾಧ್ಯಕ್ಷ ವಸಂತ ಖಾರ್ವಿ ಕೂಡ ಈ ಬಗ್ಗೆ ಒತ್ತು ನೀಡಿದ್ದು, ರಾಜ್ಯದಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಮೀನುಗಾರ ಸಮುದಾಯಕ್ಕೆ ಸೇರಿದ ಏಕೈಕ ವ್ಯಕ್ತಿ ಮಾಂಕಾಳ್ ವೈದ್ಯರಾಗಿದ್ದು ಇವರನ್ನು ಮೀನುಗಾರಿಕಾ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನೂತನ ಸರಕಾರದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಎರಡನೇ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿ ಬಿ.ಜೆ.ಪಿ. ಅಭ್ಯರ್ಥಿಯನ್ನು 32 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ದಾಖಲೆ ಮಾಡಿದ ಮಂಕಾಳ ಎಸ್ ವೈದ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕೂಗು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕೇಳಿ ಬಂದಿದೆ.

ಈ ಹಿಂದಿನ ಬಾರಿ ಕ್ಷೇತ್ರದಲ್ಲಿ ಸೋತರೂ ಕೂಡಾ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಮತ್ತು ಜಿಲ್ಲೆಯಲ್ಲಿಯೇ ಭಟ್ಕಳ ಕ್ಷೇತ್ರವನ್ನು ಕಾದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದ ಮಂಕಾಳ ವೈದ್ಯ ಅವರು ಶಾಸಕರಾಗಿದ್ದಾಗಲೂ ಕೂಡಾ ದಾಖಲೆ ಮಾಡಿದ್ದ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಈ ಹಿಂದೆಯೇ ಆಗ್ರಹ ಮಾಡಿದ್ದು ಜಿಲ್ಲೆಯಾದ್ಯಂತ ಸಚಿವರನ್ನಾಗಿ ಮಾಡಬೇಕೆನ್ನುವ ಆಗ್ರಹ ಹೆಚ್ಚುತ್ತಿದೆ.

ನಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್ ಈ ಹಿಂದೆ 1989ರಲ್ಲಿ ಆರ್.ಎನ್. ನಾಯ್ಕ ಅವರಿಗೆ ಮಂತ್ರಿ ಸ್ಥಾನ ನೀಡಿದ ನಂತರ ಮತ್ತೆ ಮಂತ್ರಿ ಸ್ಥಾನ ಕೊಟ್ಟಿಲ್ಲ, ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರಕಾರ ಬಂದಿದ್ದು ಜಿಲ್ಲೆಯ ಪ್ರಭಾವೀ ರಾಜಕಾರಣಿ, ಮೀನುಗಾರರ ಎಕೈಕ ಪ್ರತಿನಿಧಿಯಾದ ವೈದ್ಯರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಹೊನ್ನಾವರ ಟೆಂಪೋ ಮಾಲಕ ಚಾಲಕರ ಸಂಘದ ಅಧ್ಯಕ್ಷ ನಾಗರಾಜ ಯಾಜಿ ಆಗ್ರಹಿಸಿದ್ದಾರೆ.

ಭಟ್ಕಳ ಕ್ಷೇತ್ರ ಬಹುದೊಡ್ಡ ಕ್ಷೇತ್ರವಾಗಿದ್ದು ಇಲ್ಲಿ ಕಾಂಗ್ರೆಸ್‍ನಿಂದ ಎಸ್.ಎಂ.ಯಾಹ್ಯಾ, ಆರ್.ಎನ್.ನಾಯ್ಕ ಹಾಗೂ ಬಿ.ಜೆ.ಪಿ.ಯಿಂದ ಶಿವಾನಂದ ನಾಯ್ಕ ಸಚಿವರಾಗಿದ್ದು ಬಿಟ್ಟರೆ ಮತ್ತೆ ಸಚಿವ ಸ್ಥಾನದ ದೊರೆತಿಲ್ಲ.  ಈ ಬಾರಿ ಸಚಿವ ಸ್ಥಾನ ನೀಡಲು ಉತ್ತಮ ಅವಕಾಶವಿದ್ದು ಕರಾವಳಿಯ ಮೀನುಗಾರರನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡಬೇಕು ಎಂದೂ ಆಗ್ರಹ ಕೇಳಿ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದರು ಅಭಿವೃದ್ಧಿಯಾಗುತ್ತಿದ್ದು, ಬಂದರು ಹಾಗೂ ಮೀನುಗಾರಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಮಂಕಾಳ ವೈದ್ಯ ಅವರು ಸಚಿವ ಸ್ಥಾನ ನೀಡಿದರೆ ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಮೀನುಗಾರರಿಗೆ ದೊರೆಯ ಬೇಕಾದ ಸೌಲಭ್ಯಗಳು, ಬಂದರುಗಳಲ್ಲಿ ಅಗತ್ಯ ಸೌಲಭ್ಯಗಳು ಸೇರಿದಂತೆ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ ಎಲ್ಲದರಲ್ಲಿಯೂ ಪರಿಣಿತಿ ಹೊಂದಿರುವ ಮಂಕಾಳ ವೈದ್ಯ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದೂ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಆಗ್ರಹಿಸಿದ್ದಾರೆ.

Similar News