ಸುಡಾನ್: ವಾರಾವಧಿಯ ಕದನವಿರಾಮಕ್ಕೆ ಸಮ್ಮತಿ‌

Update: 2023-05-21 17:02 GMT

ಖಾರ್ಟಮ್, ಮೇ 21: ಸುಡಾನ್ ನಲ್ಲಿ ಸೇನಾಪಡೆ ಮತ್ತು ಅರೆಸೇನಾ ಪಡೆಯ ನಡುವೆ ನಡೆಯುತ್ತಿರುವ ಸಂಘರ್ಷ ಮುಂದುವರಿದಿದ್ದು ಶನಿವಾರ ರಾಜಧಾನಿ ಖಾರ್ಟಮ್ ಅನ್ನು ಗುರಿಯಾಗಿಸಿ ವೈಮಾನಿಕ ದಾಳಿ ಮತ್ತು ಫಿರಂಗಿ ದಾಳಿ ನಡೆದಿದೆ.  ಈ ಮಧ್ಯೆ, ಮೇ 22ರ ಸಂಜೆಯಿಂದ ಅನ್ವಯಿಸುವಂತೆ 7 ದಿನಗಳ ಕದನವಿರಾಮ ಜಾರಿಗೆ ಎರಡೂ ತಂಡಗಳು ಸಮ್ಮತಿಸಿವೆ ಎಂದು ವರದಿಯಾಗಿದೆ.

ಜಿದ್ದಾದಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು 7 ದಿನಗಳ ಕದನ ವಿರಾಮ ಜಾರಿಗೆ ಬರಲಿದೆ. ಉಭಯ ತಂಡವೂ ಸಮ್ಮತಿಸಿದರೆ ಮತ್ತೆ ವಿಸ್ತರಿಸಲಾಗುವುದು  ಎಂದು ಮಧ್ಯಸ್ಥಿಕೆದಾರನ ಪಾತ್ರ ವಹಿಸಿದ್ದ ಅಮೆರಿಕ ಮತ್ತು ಸೌದಿ ಅರೆಬಿಯಾದ ಜಂಟಿ ಹೇಳಿಕೆ ತಿಳಿಸಿದೆ. ಈ ಹಿಂದಿನ ಕದನ ವಿರಾಮ ಒಪ್ಪಂದವನ್ನು ಎರಡೂ ಕಡೆಯವರು ಉಲ್ಲಂಘಿಸಿರುವುದರಿಂದ ಈ ಬಾರಿಯ ಒಪ್ಪಂದದಲ್ಲಿ ಹೆಚ್ಚಿನ ಜಾಗೃತೆ ವಹಿಸಲಾಗಿದ್ದು ಒಪ್ಪಂದಕ್ಕೆ ಎರಡೂ ಕಡೆಯವರ ಸಹಿ ಪಡೆಯಲಾಗಿದೆ ಮತ್ತು ಇದಕ್ಕೆ ಅಮೆರಿಕ , ಸೌದಿ ಅರೆಬಿಯಾ ಹಾಗೂ ಅಂತರಾಷ್ಟ್ರೀಯ ಬೆಂಬಲದ ಕದನವಿರಾಮ ನಿಗಾ ವ್ಯವಸ್ಥೆಯ ಬೆಂಬಲ ಇರಲಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ಹೇಳಿದೆ.

ಮುಂದಿನ ಹಂತದ ಮಾತುಕತೆಗಳು ನಾಗರಿಕರ ಭದ್ರತೆ ಮತ್ತು ಮಾನವೀಯ ಪರಿಸ್ಥಿತಿಗಳನ್ನು ಸುಧಾರಿಸಲು ಅಗತ್ಯವಾದ ಹೆಚ್ಚುವರಿ ಕ್ರಮಗಳ ಮೇಲೆ ಕೇಂದ್ರೀಕರಿಸುತ್ತದೆ. ಮನೆಗಳು ಸೇರಿದಂತೆ ನಗರ ಕೇಂದ್ರಗಳಿಂದ ಪಡೆಗಳನ್ನು ತೆರವುಗೊಳಿಸುವುದು, ನಾಗರಿಕರು ಮತ್ತು ಮಾನವೀಯ ನೆರವು ಒದಗಿಸುವವರ ಮುಕ್ತ ಚಲನೆಗೆ ಇರುವ ತಡೆಯನ್ನು ನಿವಾರಿಸುವುದು, ಸರಕಾರಿ ಸಿಬಂದಿಗಳು ತಮ್ಮ  ಕರ್ತವ್ಯ ಮುಂದುವರಿಸುವುದಕ್ಕೆ ಅವಕಾಶ ಒದಗಿಸುವುದು ಇದರಲ್ಲಿ ಸೇರಿದೆ ಎಂದು ಹೇಳಿಕೆ ತಿಳಿಸಿದೆ. 

ಖತರ್ ನ ರಾಯಭಾರ ಕಚೇರಿಗೆ ನುಗ್ಗಿದ ಶಸ್ತ್ರಸಜ್ಜಿತರ ತಂಡವು ದಾಂಧಲೆ ನಡೆಸಿದೆ. ಆದರೆ ರಾಜತಾಂತ್ರಿಕರನ್ನು ಮತ್ತು ಸಿಬಂದಿಗಳನ್ನು ಈ ಹಿಂದೆಯೇ ಅಲ್ಲಿಂದ ಸ್ಥಳಾಂತರಿಸಿರುವುದರಿಂದ ಯಾರಿಗೂ ದೈಹಿಕ ಹಾನಿ ಸಂಭವಿಸಿಲ್ಲ. ರಾಯಭಾರ ಕಚೇರಿಯ ವಸ್ತುಗಳನ್ನು ದೋಚಲಾಗಿದೆ ಎಂದು ಖತರ್ನ ವಿದೇಶಾಂಗ ಇಲಾಖೆ ಹೇಳಿದೆ. ಈ ದಾಳಿಗೆ ಅರೆಸೇನಾ ಪಡೆ ಹೊಣೆ ಎಂದು  ಸುಡಾನ್ ನ ಸೇನಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೋರ್ಡನ್, ಸೌದಿ ಅರೆಬಿಯಾ ಮತ್ತು ಟರ್ಕಿಯ ರಾಯಭಾರ ಕಚೇರಿಗಳೂ ದಾಳಿಗೆ ಒಳಗಾಗಿವೆ.

ಅರೆಸೇನಾ ಪಡೆಯ ಪ್ರಾಬಲ್ಯವಿರುವ ದಾರ್ಫುರ್ ಪ್ರಾಂತದಲ್ಲಿ ಕಳೆದ ಗುರುವಾರದಿಂದ ಸಂಘರ್ಷಕ್ಕೆ 22 ಮಂದಿ ಬಲಿಯಾಗಿದ್ದು ಸ್ಥಳೀಯರು ಸುರಕ್ಷಿತ ಪ್ರದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಿಂಸಾಚಾರದಿಂದ ಭಯಗೊಂಡು ಪಲಾಯನ ಮಾಡುತ್ತಿರುವ ಸುಡಾನೀಯರಿಗೆ ನೆರವಾಗಲು 22 ದಶಲಕ್ಷ ಡಾಲರ್ ತುರ್ತು ನಿಧಿಯನ್ನು ನಿಗದಿಗೊಳಿಸಿದ್ದು ಚಾಡ್, ಮಧ್ಯ ಆಫ್ರಿಕನ್ ಗಣರಾಜ್ಯ, ಈಜಿಪ್ಟ್ ಮತ್ತು ದಕ್ಷಿಣ ಸುಡಾನ್ ನಲ್ಲಿ ಆಶ್ರಯ ಕೋರುವ ಸುಡಾನೀಯರಿಗೆ ನೆರವು ಒದಗಿಸಲು ಬಳಸಲಾಗುವುದು ಎಂದು  ವಿಶ್ವಸಂಸ್ಥೆ ನೆರವು ನಿಧಿಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ ಹೇಳಿದ್ದಾರೆ.

ಸ್ಥಳಾಂತರಗೊಂಡ ಜನರಿಗೆ ನೆರವು ಒದಗಿಸಲು 103 ದಶಲಕ್ಷ ಡಾಲರ್ ಒದಗಿಸುವುದಾಗಿ ಸುಡಾನ್ನ ನೆರೆಹೊರೆಯ ದೇಶಗಳಿಗೆ ಅಮೆರಿಕ ವಾಗ್ದಾನ ನೀಡಿದೆ.  

Similar News