ಕಾನೂನು ಸುವ್ಯವಸ್ಥೆ ಹದಗೆಡುವ ಕಾರಣಕ್ಕೆ ಮುಸ್ಲಿಂ ಯುವಕ ಹಾಗೂ ಬಿಜೆಪಿ ನಾಯಕನ ಪುತ್ರಿಯ ವಿವಾಹ ಮುಂದೂಡಿಕೆ

Update: 2023-05-22 09:05 GMT

ಡೆಹ್ರಾಡೂನ್: ಬಿಜೆಪಿ ನಾಯಕರು ಹಾಗೂ ಸ್ಥಳೀಯ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತವಾಗಿರುವುದರಿಂದ ಮುಂದಿನ ವಾರ ನಡೆಯಬೇಕಿದ್ದ ಮುಸ್ಲಿಂ ಯುವಕನೊಂದಿಗೆ ನಡೆಯಬೇಕಿದ್ದ ಉತ್ತರಾಖಂಡ ಬಿಜೆಪಿ ಪಕ್ಷದ ಹಿಂದೂ ನಾಯಕನ ಪುತ್ರಿಯ ವಿವಾಹವನ್ನು ಮುಂದೂಡಲಾಗಿದೆ ಎಂದು The Telegraph ವರದಿ ಮಾಡಿದೆ.

ಶನಿವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿರುವ ಪೌರಿ ನಗರ ಪಾಲಿಕೆ ಅಧ್ಯಕ್ಷರಾಗಿರುವ ಯಶ್‌ಪಾಲ್ ಬೇನಂ ಈ ಕುರಿತು ಪ್ರಕಟಿಸಿದ್ದಾರೆ.

ಇದೇ ಮೇ 28ರಂದು ಬೇನಂ ಅವರ ಪುತ್ರಿ ಮೋನಿಕಾ ಮುಸ್ಲಿಂ ಯುವಕ ಮೋನಿಸ್ ಎಂಬುವವರೊಂದಿಗೆ ವಿವಾಹವಾಗಬೇಕಿತ್ತು.

ಆದರೆ, ಈ ವಿವಾಹ ಆಮಂತ್ರಣವು ಅಂತರ್ಜಾಲ ತಾಣದಲ್ಲಿ ಹಂಚಿಕೆಯಾದ ನಂತರ ತೀವ್ರ ಟೀಕೆ ಹಾಗೂ ನಿಂದನೆಗೆ ಗುರಿಯಾಗಿತ್ತು. ಕೆಲವು ಮಂದಿ ಈ ವಿವಾಹವನ್ನು ಲವ್ ಜಿಹಾದ್ ಎಂದೂ ಕಿಡಿ ಕಾರಿದ್ದರು. ಹೀಗಾಗಿ, ವಿವಾಹದ ಕಾರಣಕ್ಕೆ ಸ್ಥಳೀಯ ಆಡಳಿತ ಹಾಗೂ ಪೊಲೀಸರು ಸಮಸ್ಯೆ ಎದುರಿಸುವುದು ನನಗೆ ಬೇಡವಾಗಿದೆ ಎಂದು ಶನಿವಾರ ಬೇನಂ ತಿಳಿಸಿದ್ದರು.

"ನಮ್ಮ ಪಕ್ಷದ ಸದಸ್ಯರೇ ವಿವಾಹದ ಕುರಿತು ವಿವಾದ ಸೃಷ್ಟಿಸಿರುವುದರಿಂದ ನಾನು ವರನ ಪೋಷಕರೊಂದಿಗೆ ಈ ಕುರಿತು ಚರ್ಚಿಸಿದ್ದು, ತಾತ್ಕಾಲಿಕವಾಗಿ ಎಲ್ಲ ವೈವಾಹಿಕ ಕಾರ್ಯಕ್ರಮಗಳನ್ನು ರದ್ದು ಮಾಡಲು ಒಟ್ಟಾಗಿ ತೀರ್ಮಾನಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ಕೆಲವು ಸ್ಥಳೀಯ ಹಿಂದೂ ಸಂಘಟನೆಗಳು ವಿವಾಹದ ದಿನದಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂಬ ಸಂಗತಿ ನನಗೆ ತಿಳಿದು ಬಂದಿದೆ ಎಂದೂ ಅವರು ಬಹಿರಂಗಗೊಳಿಸಿದ್ದಾರೆ.

"ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಕುಟುಂಬದವರು ಮೇ 26, 27 ಹಾಗೂ 28ರಂದು ನಡೆಸಲು ಉದ್ದೇಶಿಸಲಾಗಿದ್ದ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳದಿರಲು ನಿರ್ಧರಿಸಿದ್ದೇವೆ. ಮುಂದೇನು ಮಾಡಬೇಕು ಎಂದು ಕೂಡಲೇ ನಿರ್ಧರಿಸುತ್ತೇವೆ" ಎಂದು ಬೇನಂ ತಿಳಿಸಿದ್ದಾರೆ.

Similar News