ವಿಶ್ವ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಛೋಪ್ರಾ

Update: 2023-05-23 15:07 GMT

ಹೊಸದಿಲ್ಲಿ: ಒಲಿಂಪಿಕ್ ಚಾಂಪಿಯನ್ ನೀರಜ್ ಛೋಪ್ರಾ ತಮ್ಮ ವೃತ್ತಿಜೀವನದಲ್ಲಿ ಮೊಟ್ಟಮೊದಲ ಬಾರಿಗೆ ವಿಶ್ವ ಪುರುಷರ ಜಾವೆಲಿನ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ರ್ಯಾಂಕಿಂಗ್ನಲ್ಲಿ ಛೋಪ್ರಾ 1455 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದು, ಗ್ರೆನಾಡಾದ ಹಾಲಿ ವಿಶ್ವಚಾಂಪಿಯನ್ ಅಂಡರ್ಸನ್ ಪೀಟರ್ಸ್ (1433) ಅವರಿಗಿಂತ 22 ಅಂಕಗಳಷ್ಟು ಮುಂದಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನ ಬೆಳ್ಳಿಪದಕ, ಜೆಕೋಸ್ಲೋವಾಕಿಯಾದ ವಿಜೇತ ಜಾಕುಬ್ ವದ್ಲೇಚ್ 1416 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಎರಡನೇ ಸ್ಥಾನಕ್ಕೇರಿದ್ದ 25 ವರ್ಷ ವಯಸ್ಸಿನ ಛೋಪ್ರಾ ಆ ಬಳಿಕ ಇದುವರೆಗೂ ಪೀಟರ್ಸ್ಗಿಂತ ಹಿಂದಿದ್ದರು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ನೀರಜ್ ಛೋಪ್ರಾ ಡೈಮಂಡ್ ಲೀಗ್ 2022 ಫೈನಲ್ಸ್  ನಲ್ಲಿ ಗೆದ್ದು, ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಈ ವರ್ಷದ ಮೇ 5ರಂದು ಅವರು ಪ್ರಸ್ತುತ ಸೀಸನ್ ನ ಮೊದಲ ದೋಹಾ ಡೈಮಂಡ್ ಲೀಗ್ ನಲ್ಲಿ 88.67 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಪ್ರಶಸ್ತಿ ಗೆದ್ದಿದ್ದರು. ನೆದರ್‌ಲ್ಯಾಂಡ್‌ನಲ್ಲಿ ಜೂನ್ 4ರಂದು ನಡೆಯುವ ಎಫ್ಬಿಕೆ ಗೇಮ್ಸ್‌ನಲ್ಲಿ, ಬಳಿಕ ಜೂನ್ 13ರಂದು ಫಿನ್ಲೆಂಡ್ ನ ತುರ್ಕು ಎಂಬಲ್ಲಿ ನಡೆಯುವ ಪಾವೊ ನುರ್ಮಿ ಗೇಮ್ಸ್ ನಲ್ಲಿ ಪಾಳ್ಗೊಳ್ಳುವರು.

Similar News