ಭಟ್ಕಳದಲ್ಲಿ ಕುಡಿಯುವ ನೀರಿನ ಸಮಸ್ಯೆ; ಮಳೆರಾಯನ ನಿರೀಕ್ಷೆಯಲ್ಲಿ ಜನಸಾಮಾನ್ಯರು

Update: 2023-05-23 14:49 GMT

ಭಟ್ಕಳ: ರಾಜ್ಯದ ಸುತ್ತಮುತ್ತಲೂ ಮಳೆಯಾಗುತ್ತಿದೆ. ಉ.ಕ.ಜಿಲ್ಲೆಯ ಹಲವು ತಾಲೂಕುಗಳಲ್ಲಿ ಈಗಾಗಲೆ ಎರಡು ಮೂರು ಬಾರಿ ಮಳೆ ಬಿದ್ದಿದೆ. ಆದರೆ ಭಟ್ಕಳದಲ್ಲಿ ಮಾತ್ರ ಇನ್ನೂ ಮಳೆ ಬೀಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ಕುಡಿಯುವ ನೀರಿನ ಬಾವಿಗಳು, ನದಿ, ಹೊಳೆ, ಹಳ್ಳಗಳು ಒಣಗಿ ಹೋಗಿದ್ದು ಮಳೆಯರಾಯನ ನಿರೀಕ್ಷೆಯಲ್ಲಿ ರೈತನ ಬೆವರು ಬಸಿಯುತ್ತಿದೆ. ಕುಡಿಯುವ ನೀರಿಲ್ಲದೆ ಜನಸಾಮಾನ್ಯ ಹೈರಾಣಾಗಿದ್ದಾನೆ. ಈ ನಡುವೆ ಕೆಲ ಸಾಮಾಜಿಕ ಸಂಘಸಂಸ್ಥೆಗಳು, ತಾಲೂಕಾಡಳಿತ ಕುಡಿಯುವ ನೀರು ಪೂರೈಕೆಯಲ್ಲಿ ತೊಡಗಿಕೊಂಡಿವೆ. ಆದರೆ ಇದು ಯಾವುದಕ್ಕೂ ಸಾಲಾದಾಗಿದೆ. ಏಕೆಂದರೆ ಪ್ರಾಕೃತಿಕವಾಗಿ ಬೀಳುವ ಮಳೆ ನೀರಿನ ಮುಂದೆ ಮನುಷ್ಯನ ಕೃತಕ ಸಹಾಯ ಯಾವುದಕ್ಕೂ ಸಾಲದು. 

ಕರ್ನಾಟಕದ ಕರಾವಳಿ ತೀರದಲ್ಲಿರುವ ಭಟ್ಕಳದಲ್ಲೀಗ ಕುಡಿಯುವ ನೀರಿಗಾಗಿ ಹಹಾಕಾರ ನಡೆಯುತ್ತಿದೆ. ಇಲ್ಲಿನ ತಾಪಮಾನವು  30 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿದ್ದು, ಈ ಪ್ರದೇಶದಲ್ಲಿ ನೀರಿನ ಕೊರತೆಯನ್ನು ಉಲ್ಬಣಗೊಳಿಸಿದೆ. ಈ ಬಿಕ್ಕಟ್ಟಿನಿಂದ ಜನಸಾಮಾನ್ಯರನ್ನು ಹೊರತರಲು ಹಲವಾರು ಸಾಮಾಜಿಕ ಸಂಸ್ಥೆಗಳು ಮತ್ತು ಯುತ್ ಫೆಡರೇಷನ್ ನ ಯುವಕರು, ಚುನಾಯಿತ ಪ್ರತಿನಿಧಿಗಳು, ಜೊತೆಗೆ ತಾಲೂಕಾಡಳಿತ ಎಲ್ಲ ರೀತಿಯಿಂದಲೂ ಶ್ರಮಿಸುತ್ತಿದ್ದಾರೆ.

ಭಟ್ಕಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳು ಹೆಚ್ಚುತ್ತಿರುವ ತಾಪಮಾನವನ್ನು ಅನುಭವಿಸುತ್ತಿವೆ, ನೀರಿನ ಕೊರತೆಯ ಸಮಸ್ಯೆಯನ್ನು ತೀವ್ರಗೊಳಿಸುತ್ತಿದೆ, ನೀರಿನ ಸಂಪನ್ಮೂಲಗಳನ್ನು ಗಣನೀಯವಾಗಿ ತಗ್ಗಿದ್ದು ಇದರಿಂದಾಗಿ ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ.

ಭಟ್ಕಳದಲ್ಲಿ ಜಾತಿ ಧರ್ಮ, ಭಾಷೆ ಯಾವುದನ್ನು ಲೆಕ್ಕಿಸದೆ ಇಲ್ಲಿನ ಸಾಮಾಜಿಕ ಸಂಘ ಸಂಸ್ಥೆಗಳು, ಕ್ರೀಡಾ ಸಂಘಟನೆಗಳು ಸಾರ್ವಜನಿಕರ ಸಹಾಯಕ್ಕೆ ಬಂದು ನಿಂತುಕೊಂಡಿದ್ದು ನಿಜವಾಗಿಯೂ ಅವರನ್ನು ಜನರು ಕೃತಜ್ಞತೆ ಹೇಳುತ್ತಿದ್ದಾರೆ. ಭಟ್ಕಳದಲ್ಲಿ ನೀರಿನ ತೀವ್ರ ಅಭಾವವಿರುವುದು ನಿಜ, ಆದರೆ ಸರ್ಕಾರವು ಟ್ಯಾಂಕರ್ ಮೂಲಕ ಕೆಲವು ಪ್ರದೇಶಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತದೆ. ಆದಾಗ್ಯೂ, ಸಾಮಾಜಿಕ ಸಂಸ್ಥೆಗಳು ಮತ್ತು ಕ್ರೀಡಾ ಕೇಂದ್ರಗಳು ಸಂಘಟಿತರಾಗಿ ಪ್ರತಿ ಮನೆಯನ್ನು ತಲುಪಿ ನೀರು ಸರಬರಾಜು ಮಾಡುತ್ತಿವೆ. ಇದರಿಂದಾಗಿ ಸರ್ಕಾರಕ್ಕೂ ಹೊರೆ ಕಡಿಮೆಯಾದಂತಾಗಿದೆ.

ಅನಿವಾಸಿ ಭಾರತೀಯರ ಒಕ್ಕೂಟವಾಗಿರುವ ರಾಬಿತಾ ಸೊಸೈಟಿ ನೀರಿನ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಬೆಳೆಸಲು ಸಂಸ್ಥೆಯು ಸಮರ್ಪಿತವಾಗಿದೆ ಎಂದು ಭಟ್ಕಳದಾದ್ಯಂತ ವಿವಿಧೆಡೆ ಮನೆ-ಮನೆಗೆ ನೀರು ಸರಬರಾಜು ಮಾಡುವ ಕಾರ್ಯ ಕೈಗೊಂಡಿರುವುದಾಗಿ ರಾಬಿತಾ ನೀರು ಸರಬರಾಜು ತಂಡದ ಪ್ರಭಾರಿ ಅಬ್ದುಲ್ ಸಮಿ ಕೋಲ ತಿಳಿಸಿದ್ದಾರೆ.  ರಾಬಿತಾ ವಾಟರ್ ವಾಹನವು ದಿನಕ್ಕೆ ಆರರಿಂದ ಏಳು ಟ್ರಿಪ್‍ಗಳಷ್ಟು ನೀರನ್ನು ವಿತರಿಸುತ್ತಿದೆ. ಪ್ರತಿ ಟ್ರಿಪ್‍ಗೆ 4,000 ಲೀಟರ್ ನಂತೆ ಸರಿಸುಮಾರು 20 ದಿನಗಳಿಂದ ನೀರಿನ ಪೂರೈಕೆಯನ್ನು ಮಾಡುತ್ತಿದೆ.

ಭಟ್ಕಳದಲ್ಲಿ ನೀರಿನ ಅಭಾವವಿರುವ ಎಲ್ಲ ಪ್ರದೇಶಗಳಿಗೆ ಧರ್ಮ, ಜಾತಿ ಬೇಧವಿಲ್ಲದೆ ನೀರು ಒದಗಿಸಲಾಗುತ್ತಿದೆ. ಒಂದು ವೇಳೆ ಯಾವುದೇ ಪ್ರದೇಶದಲ್ಲಿ ನೀರಿನ ಅಗತ್ಯವಿದ್ದಲ್ಲಿ  ಮೊಬೈಲ್ ಸಂಖ್ಯೆ 8971918484 ಅವರನ್ನು ಸಂಪರ್ಕಿಸಿದರೆ ಆ ಪ್ರದೇಶಕ್ಕೆ ರಾಬಿತಾ ಸಂಸ್ಥೆಯು ನೀರಿನ ಟ್ಯಾಂಕರ್ ಕಳುಹಿಸುತ್ತಿದೆ ಎಂದು ಸಮಿ ಕೋಲಾ ಮಾಹಿತಿ ನೀಡಿದ್ದಾರೆ.

ಲಬ್ಬೈಕ್ ನವಾಯತ್ ಅಸೋಸಿಯೇಶನ್ ಅಧ್ಯಕ್ಷ ರಯೀಸ್ ರುಕ್ನುದ್ದೀನ್ ನೀಡಿದ ಮಾಹಿತಿಯಂತೆ, ತಮ್ಮ ಸಂಸ್ಥೆಯು ಪ್ರತಿ ಟ್ರಿಪ್‍ಗೆ 2,000 ಲೀಟರ್ ನೀರು ಪೂರೈಸುತ್ತಿದೆ. ಅವರ ವಾಹನವು ದಿನಕ್ಕೆ ಹತ್ತಕ್ಕೂ ಹೆಚ್ಚು ಟ್ರಿಪ್‍ಗಳನ್ನು ಮಾಡುತ್ತದೆ, ಕಿದ್ವಾಯಿ ರಸ್ತೆ, ಮೌಲಾನಾ ಆಜಾದ್ ರಸ್ತೆ, ಮಣಕುಳಿ, ಗುಲ್ಮಿ, ಉಸ್ಮಾನ್ ನಗರ, ಬಸ್ತಿ ರಸ್ತೆ ಮತ್ತು ಹಳೆಯ ಬಸ್ ನಿಲ್ದಾಣ ಪ್ರದೇಶದಲ್ಲಿ ನೀರು ಸರಬರಾಜು ಸೇವೆ ನಡೆಯುತ್ತಿದೆ. ಜನರ ಧಾರ್ಮಿಕ ಅಥವಾ ಸಾಂಸ್ಕೃತಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಇವರ ನೀರು ಸೇವೆ ಲಭ್ಯವಿದೆ ಎಂದು ಹೇಳುತ್ತಾರೆ. 

ಹನೀಫ್ ಅಬಾದ್ ವೆಲ್ಫೇರ್ ಅಸೋಸಿಯೇಷನ್ (ಎಚ್‍ಡಬ್ಲ್ಯೂಎ), ಆಜಾದ್ ನಗರ ಫ್ರೆಂಡ್ಸ್ ಅಸೋಸಿಯೇಷನ್ (ಎಎನ್‍ಎಫ್‍ಎ), ಬಿನ್ ಅಲಿ ಅಸೋಸಿಯೇಷನ್, ಶಾಹೀನ್ ಮಕ್ದೂಮ್ ಸ್ಪೋಟ್ರ್ಸ್ ಸೆಂಟರ್, ಕೆಲವರು ವಯಕ್ತಿಕವಾಗಿಯೂ ತಮ್ಮ ತಮ್ಮ ಪ್ರದೇಶಗಳಲ್ಲಿ  ಮನೆ-ಮನೆಗೆ ನೀರು ಸರಬರಾಜು ಮಾಡುತ್ತಿವೆ. 

ಭಟ್ಕಳದ ನೀರಿನ ಸಮಸ್ಯೆಯ ತೀವ್ರತೆಯನ್ನು ಅರಿತು ಕಾರವಾರ-ಅಂಕೋಲಾ ಮತ್ತು ಭಟ್ಕಳ-ಹೊನಾವರ ಕ್ಷೇತ್ರದ ಚುನಾಯಿತ ಶಾಸಕರಾದ ಸತೀಶ ಸೈಲ್ ಮತ್ತು ಮಾಂಕಾಳ್ ವೈದ್ಯ ಅವರು ನಾಲ್ಕು ತಾಲೂಕುಗಳ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಉ.ಕ.ಜಿಲ್ಲಾದ್ಯಂತ ನೀರಿನ ಕೊರತೆ ನೀಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬರಿದಾಗುತ್ತಿದೆ ಕಡವಿನಕಟ್ಟೆ ಆಕಾಶದೆಡೆ ಮುಖಮಾಡುತ್ತಿರುವ ರೈತಾಪಿ ಜನ: ಹೆಚ್ಚುತ್ತಿರುವ ಬಿಸಿಲ ತಾಪಮಾನಕ್ಕೆ ಕಡವಿನಕಟ್ಟೆ ಡ್ಯಾಂನಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇದೇ ರೀತಿಯ ತಾಪಮಾನ ಮುಂದುವರಿದರೆ ಪಟ್ಟಣ ಮತ್ತಿತರ ಭಾಗಗಳಲ್ಲಿ ಕುಡಿಯುವ ನೀರಿಗೆ ತೀರಾ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಪಟ್ಟಣದ ಕುಡಿಯುವ ನೀರು ಸರಬರಾಜಿನ ಏಕೈಕ ಮೂಲವಾಗಿರುವ ಈ ಡ್ಯಾಂನಲ್ಲಿ ಏಪ್ರಿಲ್ ಮೊದಲ ವಾರದಲ್ಲಿಯೇ ನೀರಿನ ಒಳಹರಿವು ಕಡಿಮೆಯಾಗಿ, ತಳದಲ್ಲಿನ ಹೂಳು ಕಾಣಿಸುತ್ತಿದೆ. ಶೀಘ್ರದಲ್ಲಿ ಮಳೆ ಬರದೇ ಇದ್ದಲ್ಲಿ ಕಷ್ಟವಾಗಲಿದೆ,  ಈ ಡ್ಯಾಂ ನಿರ್ಮಿಸಿರುವ ಉದ್ದೇಶವೇ ಕೃಷಿ ಚಟುವಟಿಕೆಗೆ ನೀರು ನೀಡುವುದಾಗಿದ್ದು, ನಂತರದ ದಿನಗಳಲ್ಲಿ ಭಟ್ಕಳ ಪಟ್ಟಣ, ಶಿರಾಲಿ, ಜಾಲಿ, ಮಾವಿನಕುರ್ವೆ ಮುಂತಾದ ಕಡೆ ಕುಡಿಯಲು ಪೂರೈಸಲಾಯಿತು.

ಈಗ ತುಂಬಿದ ಹೂಳಿನಿಂದಾಗಿ ಬೇಸಿಗೆಯಲ್ಲಿ ನೀರು ಸಹಜವಾಗಿ ಕಡಿಮೆಯಾಗುತ್ತದೆ. ನಿರ್ಮಾಣವಾದಾಗಿನಿಂದ ಇಂದಿನ ತನಕವೂ ಕೂಡಾ ಕೃಷಿಕರಿಗೆ ಶಿರಾಲಿ, ಸಾರದಹೊಳೆ, ಬೇಂಗ್ರೆ ಇತ್ಯಾದಿಯಾಗಿ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಾ ರೈತರ ಪಾಲಿಗೆ ಸಂಜೀನಿಯಾಗಿತ್ತು. ಮಳೆಗಾಲದ ನಂತರ ಕೃಷಿಕರು ಈ ನೀರನ್ನೇ ನಂಬಿ ಎರಡು ಬೆಳೆ ಬೆಳೆಯುತ್ತಿದ್ದರು. ಈಗ ನೀರಿನ ಹರಿವು ಸರಿಯಾಗಿ ಇಲ್ಲದೇ ಇರುವುದರಿಂದ ಒಂದೇ ಬೆಳೆಗೆ ಕೃಷಿಕರು ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಈ ಡ್ಯಾಂ ಮೊದಲು ಭಟ್ಕಳ ಪಟ್ಟಣಕ್ಕೆ ಇಲ್ಲಿಂದ ನೀರು ಸರಬರಾಜು ಮಾಡಲು ರೈತರ ವಿರೋಧಿಸಿದರು. ಆದಾಗ್ಯೂ ಬೃಹತ್ ಪಂಪ್ ಹಾಕಲಾಯಿತು.ಬಳಿಕ ಶಿರಾಲಿ ಮತ್ತು ಮಾವಿನಕುರ್ವೆ ಗ್ರಾಮ ಪಂಚಾಯಿತಿ, ಜಾಲಿ ಪಟ್ಟಣ ಪಂಚಾಯಿತಿಗೂ ಕುಡಿಯುವ ನೀರು ಸರಬರಾಜು ಮಂಜೂರಿ ಮಾಡಿಸಿ ಇಲ್ಲಿಂದಲೇ ನೀರು ಸರಬರಾಜು ಮಾಡಲಾಯಿತು. ಆದರೆ, ಡ್ಯಾಂನಲ್ಲಿ ಹೂಳು ತೆಗೆಯಿಸಲು ಮತ್ತು ಹೆಚ್ಚಿನ ನೀರಿನ ಸಂಗ್ರಹಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಯಾರೂ ಮುಂದಾಗದೇ ಇರುವುದು ವಿಪರ್ಯಾಸ.

Similar News