ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್: 18 ದಿನಗಳಲ್ಲಿ ಐದು ಸಾವುಗಳಿಗೆ ಸಾಕ್ಷಿಯಾದ ತಮಿಳುನಾಡು
ನಿಷೇಧ ಕಾಗದದಲ್ಲಿ ಮಾತ್ರ!
ಚೆನ್ನೈ,ಮೇ 23: ತಮಿಳುನಾಡಿನಲ್ಲಿ ಮೇ 1ರಿಂದ 18 ದಿನಗಳ ಅವಧಿಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅಥವಾ ದೈಹಿಕವಾಗಿ ಮಲಗುಂಡಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಂಡಿದ್ದ ನಾಲ್ವರು ದಲಿತರು ಮತ್ತು ಓರ್ವ ಮುಸ್ಲಿಮ್ ಸೇರಿದಂತೆ ಕನಿಷ್ಠ ಐವರು ಮೃತಪಟ್ಟಿದ್ದಾರೆ.
ಜಾತಿಯಾಧಾರಿತ ಈ ಪದ್ಧತಿಯನ್ನು 1993ರಲ್ಲಿಯೇ ಭಾರತದಲ್ಲಿ ನಿಷೇಧಿಸಲಾಗಿದೆ, ಆದರೂ ಮ್ಯಾನ್ಯುವಲ್ ಸ್ಕಾವೆಂಜಿಂಗ್ ನಿಂದಾಗಿ ಸಾವುಗಳು ಸಂಭವಿಸುವುದು ನಿಂತಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಸಾವುಗಳನ್ನು ತಡೆಯುವಲ್ಲಿ ನಿರಂತರ ವೈಫಲ್ಯದಿಂದಾಗಿ ತಮಿಳುನಾಡು ಕುಖ್ಯಾತಿಗೀಡಾಗಿದೆ. ಕೇಂದ್ರ ಸರಕಾರದ ಅಂಕಿಅಂಶಗಳಂತೆ 2017 ಮತ್ತು 2022ರ ನಡುವೆ ದೇಶಾದ್ಯಂತ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ 400 ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ತಮಿಳುನಾಡು 56 ಸಾವುಗಳೊಂದಿಗೆ ಉತ್ತರ ಪ್ರದೇಶ (61)ದ ನಂತರದ ಸ್ಥಾನದಲ್ಲಿದೆ. ಆದರೂ ನಿಷೇಧಿತ,ಅಮಾನವೀಯ ಪದ್ಧತಿಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರಕಾರವು ವಿಫಲಗೊಂಡಿದೆ.
ಇತ್ತೀಚಿನ ಸರಣಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಸಾವುಗಳು ಮತ್ತೊಮ್ಮೆ ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿವೆ. ಜನರನ್ನು ಮ್ಯಾನ್ಯುವಲ್ ಸ್ಕಾವೆಂಜಿಂಗ್ನಲ್ಲಿ ತೊಡಗಿಸುವವರ ವಿರುದ್ಧ ಕಠಿಣ ಕ್ರಮ,ಜಾಗ್ರತಿ ಅಭಿಯಾನಗಳು,ಈ ಕಾರ್ಯದಲ್ಲಿ ತೊಡಗಿಕೊಂಡಿರುವವರಿಗೆ ಸೂಕ್ತ ಪುನರ್ವಸತಿ,ರಾಜ್ಯ ವಿವಿಗಳಲ್ಲಿ ನೈರ್ಮಲ್ಯ ಇಂಜಿನಿಯರಿಂಗ್ ಶಿಕ್ಷಣಕ್ಕೆ ಉತ್ತೇಜನ ಮತ್ತು ಈ ಪದ್ಧತಿಯನ್ನು ಅಂತ್ಯಗೊಳಿಸಲು ನೆರವಾಗಬಲ್ಲ ಯಂತ್ರೋಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಧನಸಹಾಯ ಇತ್ಯಾದಿ ಕ್ರಮಗಳ ಮೂಲಕ ತುರ್ತಾಗಿ ಹಸ್ತಕ್ಷೇಪ ಮಾಡುವಂತೆ ಮತ್ತು ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಅವರು ತಮಿಳುನಾಡು ಸರಕಾರವನ್ನು ಆಗ್ರಹಿಸುತ್ತಿದ್ದಾರೆ.
ಮೇ 1ರ ಕಾರ್ಮಿಕ ದಿನದಂದು ಚೆನ್ನೈ ಹೊರವಲಯದ ತಿರುವಳ್ಳೂರು ಜಿಲ್ಲೆಯ ಮಿಂಜೂರಿನಲ್ಲಿ ಶಾಲೆಯೊಂದರ ಸೆಪ್ಟಿಕ್ ಟ್ಯಾಂಕ್ನ್ನು ಸ್ವಚ್ಛಗೊಳಿಸುತ್ತಿದ್ದ ಗೋವಿಂದನ್ ಮತ್ತು ಸುಭರಾಯಲು ಮೃತಪಟ್ಟಿದ್ದರು. ಖಾಸಗಿ ಗುತ್ತಿಗೆದಾರನೋರ್ವ ಅವರನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದ.
ಮೇ 15ರಂದು ಚೆನ್ನೈನ ಪುಝಲ್ ಎಂಬಲ್ಲಿ ಮನೆಯೊಂದರ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಭಾಸ್ಕರನ್ ಮತ್ತು ಇಸ್ಮಾಯಿಲ್ ಎನ್ನುವವರು ವಿಷಾನಿಲವನ್ನು ಸೇವಿಸಿ ಸಾವನ್ನಪ್ಪಿದ್ದರೆ,ಮೇ 16ರಂದು ರಾಣಿಪೇಟ್ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿಯ ಟ್ಯಾನರಿ ಘಟಕದ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸುತ್ತಿದ್ದ ತಮಿಳ್ಸೆಲ್ವನ್ ಎಂಬಾತ ಮೃತಪಟ್ಟಿದ್ದ.
ಏಳು ಜನರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು,ಅಸ್ವಸ್ಥಗೊಂಡಿರುವ ಮೂವರು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮ್ಯಾನ್ಯುವಲ್ ಸ್ಕಾವೆಂಜಿಂಗ್ ನಿಷೇಧ ಕಾಯ್ದೆಯಡಿ ಈವರೆಗೆ ದೇಶಾದ್ಯಂತ ಕಾರ್ಮಿಕರನ್ನು ಈ ಕಾರ್ಯಕ್ಕಾಗಿ ನಿಯೋಜಿಸಿದ್ದ ಗುತ್ತಿಗೆದಾರರ ವಿರುದ್ಧ 616 ಪ್ರಕರಣಗಳು ದಾಖಲಾಗಿದ್ದು,ಈ ಪೈಕಿ ಒಂದು ಮಾತ್ರ ದೋಷನಿರ್ಣಯದಲ್ಲಿ ಅಂತ್ಯಗೊಂಡಿದೆ ಎಂದು ಕೇಂದ್ರ ಸರಕಾರವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕುರಿತು ಸಂಸದೀಯ ಸ್ಥಾಯಿ ಮಂಡಳಿಯ ಎದುರು ಒಪ್ಪಿಕೊಂಡಿದೆ.
ಮ್ಯಾನ್ಯುವಲ್ ಸ್ಕಾವೆಂಜಿಂಗ್ ನಿಷೇಧ ಕಾಯ್ದೆಯಂತೆ ಜನರನ್ನು ಇಂತಹ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ಎರಡು ಲ.ರೂ.ವರೆಗೆ ದಂಡ ವಿಧಿಸಬಹುದು. ಪುನರಾವರ್ತಿತ ಉಲ್ಲಂಘನೆಗಾಗಿ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ಗರಿಷ್ಠ ಐದು ಲ.ರೂ.ಗಳ ದಂಡವನ್ನು ವಿಧಿಸಬಹುದು.
ಸಫಾಯಿ ಕರ್ಮಚಾರಿಗಳಿಗಾಗಿ ರಾಷ್ಟ್ರೀಯ ಆಯೋಗದ ವರದಿಯಂತೆ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅನ್ನು ಮೊದಲ ಬಾರಿಗೆ ನಿಷೇಧಿಸಲಾಗಿದ್ದ 1993ರಿಂದ 2022,ಡಿ.31ರ ನಡುವೆ ದೇಶಾದ್ಯಂತ ಕನಿಷ್ಠ 1,054 ಜನರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಮೃತಪಟ್ಟಿದ್ದಾರೆ.
ಸರಕಾರವು ಸರಿಯಾಗಿ ತನಿಖೆ ನಡೆಸಿ ಕಾನೂನಿನಂತೆ ತಪ್ಪಿತಸ್ಥರನ್ನು ಜೈಲಿಗಟ್ಟಿದರೆ ಈ ವಿಷಯದಲ್ಲಿ ಜನರು ಜಾಗ್ರತರಾಗುತ್ತಾರೆ. ಆದರೆ ದುರದೃಷ್ಟವಶಾತ್ ಸರಕಾರವು ಸಂವೇದನಾಶೀಲವಾಗಿಲ್ಲ ಎಂದು ಹೇಳಿರುವ ತಮಿಳುನಾಡಿನ ಹಿರಿಯ ಪತ್ರಕರ್ತೆ ಜಯರಾಣಿ,ನೈರ್ಮಲ್ಯ ಇಂಜಿನಿಯರಿಂಗ್ ಕೋರ್ಸ್ಗಳನ್ನು ಆರಂಭಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ಇದು ತಮಿಳುನಾಡಿನ ಜಾತಿವಿರೋಧಿ ಗುಂಪುಗಳ ನಿರಂತರ ಬೇಡಿಕೆಯೂ ಆಗಿದೆ. ನೈರ್ಮಲ್ಯ ಕಾರ್ಯದಲ್ಲಿ ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಳ್ಳಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎನ್ನುವುದು ಅವುಗಳ ಆರೋಪವಾಗಿದೆ.