‘ಪ್ರೇಮ ವಂಚನೆ’:ಯುವತಿಗೆ ಗುಂಡಿಕ್ಕಿ, ಆಕೆಯ ತಂದೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್
ಭೋಪಾಲ(ಮಧ್ಯಪ್ರದೇಶ),ಮೇ 23: ಪೊಲೀಸ್ ಕಾನ್ಸ್‌ಟೇಬಲ್ ಓರ್ವ ಯುವತಿಯೋರ್ವಳ ಮನೆಗೆ ನುಗ್ಗಿ ಆಕೆಯ ತಂದೆಯನ್ನು ಹತ್ಯೆಗೈದು, ಯುವತಿ ಮತ್ತು ಆಕೆಯ ಸೋದರನನ್ನು ಗಾಯಗೊಳಿಸಿದ ಬಳಿಕ ಚಲಿಸುತ್ತಿದ್ದ ರೈಲಿನೆದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಮಲಿಖೇಡಿ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
25ರ ಹರೆಯದ ಯುವತಿ ಮತ್ತು ಆಕೆಯ ಸೋದರನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಸ್ ನಲ್ಲಿ ಪೊಲೀಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಭಾಷ ಖರಾಡಿ (26) ರವಿವಾರ ಬೆಳಗಿನ ಜಾವ ಝಾಕಿರ್ ಶೇಖ್ (55) ಅವರ ಮನೆಯೊಳಗೆ ನುಗ್ಗಿದ್ದ. ನಾಡಪಿಸ್ತೂಲು ಹೊಂದಿದ್ದ ಆತ ಶೇಖ್, ಅವರ ಪುತ್ರಿ ಶಿವಾನಿ ಮತ್ತು ಆಕೆಯ ಸೋದರನ ಮೇಲೆ ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದ. ಶೇಖ್ ಸ್ಥಳದಲ್ಲಿಯೇ ಮೃತಪಟ್ಟರೆ,ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ,ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಂದೋರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಳಿಕ ಶಿವಾನಿಯೊಂದಿಗಿನ ತನ್ನ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಖರಾಡಿ,‘ಆಕೆ ನನ್ನನ್ನು ವಂಚಿಸಿದ್ದರಿಂದ ಆಕೆಯನ್ನು ಕೊಂದಿದ್ದೇನೆ. ಆಕೆಗೆ ಎಂದೂ ಮರೆಯಲಾಗದ ನೋವನ್ನು ನೀಡಿದ್ದೇನೆ ’ಎಂದು ಬರೆದುಕೊಂಡಿದ್ದ. ಗಂಟೆಗಳ ಬಳಿಕ ರೈಲ್ವೆ ಹಳಿಗಳಲ್ಲಿ ಖರಾಡಿಯ ಛಿದ್ರವಿಚ್ಛಿದ್ರ ಶವ ಪತ್ತೆಯಾಗಿದೆ. ಆತ ಚಲಿಸುತ್ತಿದ್ದ ರೈಲಿನೆದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿಫಲ ಪ್ರೇಮ ವ್ಯವಹಾರ ಈ ಸರಣಿ ದುರಂತ ಘಟನೆಗಳಿಗೆ ಕಾರಣವಾಗಿರುವಂತಿದೆ ಎಂದು ಪೊಲೀಸರು ತಿಳಿಸಿದರು. ಈ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ಯಶಪಾಲ ಸಿಂಗ್ ರಾಜಪೂತ್ ತಿಳಿಸಿದರು.
ಈ ಆಘಾತಕಾರಿ ಪ್ರಕರಣದಲ್ಲಿ ಪೊಲೀಸರು ತ್ವರಿತ ತನಿಖೆಯನ್ನು ನಡೆಸಬೇಕು ಮತ್ತು ನ್ಯಾಯವನ್ನು ಒದಗಿಸಬೇಕು ಎಂದು ಗ್ರಾಮದ ಮಾಜಿ ಸರಪಂಚ ಸತ್ತಾರ್ ಖಾನ್ ಆಗ್ರಹಿಸಿದ್ದಾರೆ.