×
Ad

ನವೆಂಬರ್‌ನೊಳಗೆ ವಿವಾದಿತ ಅಫ್‌ಸ್ಪಾವನ್ನು ಅಸ್ಸಾಮಿನಿಂದ ಪೂರ್ಣವಾಗಿ ಹಿಂದೆಗೆದುಕೊಳ್ಳುವ ಸಾಧ್ಯತೆ: ಸಿಎಂ

Update: 2023-05-23 21:21 IST

ಗುವಾಹಟಿ,ಮೇ 23: ನವಂಬರ್ ನೊಳಗೆ ಅಸ್ಸಾಮಿನಲ್ಲಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರಗಳು) ಕಾಯ್ದೆ (ಅಫ್‌ಸ್ಪಾ)ಯನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ ಹೇಳಿದ್ದಾರೆ.

ಸೇನಾ ಸಿಬ್ಬಂದಿಗಳು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವೆಂದು ಭಾವಿಸಿದರೆ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಶೋಧಗಳನ್ನು ನಡೆಸಲು,ಬಂಧಿಸಲು ಮತ್ತು ಗುಂಡು ಹಾರಿಸಲು ವ್ಯಾಪಕ ಅಧಿಕಾರವನ್ನು ಅಫ್‌ಸ್ಪಾ ನೀಡುತ್ತದೆ.

ಈ ಕಾಯ್ದೆಯನ್ನು ಮೊದಲ ಬಾರಿಗೆ 1990,ನವಂಬರ್ ನಲ್ಲಿ ಅಸ್ಸಾಮಿನಲ್ಲಿ ಹೇರಲಾಗಿದ್ದು,ಪ್ರತಿ ಆರು ತಿಂಗಳಿಗೊಮ್ಮೆ ಭದ್ರತಾ ಸ್ಥಿತಿಯ ಪುನರ್ಪರಿಶೀಲನೆಯ ಬಳಿಕ ಅದನ್ನು ವಿಸ್ತರಿಸಲಾಗುತ್ತಿದೆ. ಪ್ರಸ್ತುತ ಅಸ್ಸಾಮಿನ ಒಂಭತ್ತು ಜಿಲ್ಲೆಗಳಲ್ಲಿ ಅಫ್‌ಸ್ಪಾ ಜಾರಿಯಲ್ಲಿದೆ. ಯಾವುದೇ ರಾಜ್ಯದಿಂದ ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರ ಸರಕಾರವು ಹೊಂದಿದೆ.

‘ಅಫ್‌ಸ್ಪಾವನ್ನು ಹಿಂದೆಗೆದುಕೊಂಡರೆ ಕಾನೂನಿನಂತೆ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಗಳ ಬದಲು ಅಸ್ಸಾಂ ಪೊಲೀಸ್ ಬಟಾಲಿಯನ್ಗಳನ್ನು ನಿಯೋಜಿಸಬೇಕಾಗುತ್ತದೆ. ನಮ್ಮ ಪೊಲೀಸ್ ಪಡೆಗೆ ತರಬೇತಿಯನ್ನು ನೀಡಲು ಮಾಜಿ ಸೇನಾ ಸಿಬ್ಬಂದಿಗಳನ್ನು ನಾವು ನೇಮಕ ಮಾಡಿಕೊಳ್ಳಲಿದ್ದೇವೆ ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ ತಿಳಿಸಿದರು.

ಅಸ್ಸಾಮಿನಿಂದ ಅಫ್‌ಸ್ಪಾವನ್ನು ಶೀಘ್ರವೇ ಹಿಂದೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕಳೆದ ವರ್ಷದ ಮೇ ತಿಂಗಳಿನಲ್ಲಿ ಹೇಳಿದ್ದರು. ಈಶಾನ್ಯ ರಾಜ್ಯಗಳಿಂದ ಅಫ್ಸ್ಪಾವನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು 2022,ಎ.28ರಂದು ಹೇಳಿದ್ದರು. ಆದಾಗ್ಯೂ ಆಗಿನಿಂದ ಎರಡು ಸಲ, ಅಕ್ಟೋಬರ್ ಮತ್ತು ಮಾರ್ಚ್ನಲ್ಲಿ ಈ ವಿವಾದಾತ್ಮಕ ಕಾಯ್ದೆಯನ್ನು ಅಸ್ಸಾಮಿನಲ್ಲಿ ವಿಸ್ತರಿಸಲಾಗಿದೆ.

Similar News