×
Ad

ಮತದಾರರ ಪಟ್ಟಿಯೊಂದಿಗೆ ಜನನ-ಮರಣ ನೋಂದಣಿ ಜೋಡಣೆ: ಅಮಿತ್ ಶಾ

Update: 2023-05-23 21:28 IST

ಹೊಸದಿಲ್ಲಿ, ಮೇ 23: ದೇಶದ ಜನನ ಮತ್ತು ಮರಣ ನೋಂದಣಿಗಳನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸುವ ಉದ್ದೇಶದ ಮಸೂದೆಯೊಂದನ್ನು ಸಂಸತ್ನಲ್ಲಿ ಮಂಡಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

ನಾಗರಿಕರಿಗೆ 18 ವರ್ಷ ತುಂಬಿದಾಗ ಅವರನ್ನು ಮತದಾರರ ಪಟ್ಟಿಗೆ ಸ್ವಯಂಚಾಲಿತವಾಗಿ ಸೇರ್ಪಡೆಗೊಳಿಸುವುದಕ್ಕೂ ಮಸೂದೆಯಲ್ಲಿ ಅವಕಾಶವಿರುತ್ತದೆ ಎಂದು ಗೃಹ ಸಚಿವರು ತಿಳಿಸಿದರು.

‘‘ಯಾರಾದರೂ ಮೃತಪಟ್ಟರೆ, ಜನಗಣತಿ ರಿಜಿಸ್ಟ್ರಾರರ, ನಿರ್ದಿಷ್ಟ ವ್ಯಕ್ತಿಯ ಸಾವಿನ ಬಗ್ಗೆ ತಮಗೆ ಮಾಹಿತಿ ಲಭಿಸಿದೆ ಎಂದು ಹೇಳುವ ನೋಟಿಸನ್ನು ಸಂಬಂಧಪಟ್ಟ ಕುಟುಂಬಕ್ಕೆ ಕಳುಹಿಸುತ್ತಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಕುಟುಂಬಕ್ಕೆ 15 ದಿನಗಳ ಕಾಲಾವಕಾಶವಿರುತ್ತದೆ. ಆ ಬಳಿಕ, ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಆ ವ್ಯಕ್ತಿಯ ಹೆಸರನ್ನು ತೆಗೆಯುತ್ತದೆ’’ ಎಂದು ಶಾ ಹೇಳಿದರು.

ದಿಲ್ಲಿಯಲ್ಲಿ ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಕಮಿಷನರ್ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ ಈ ವಿವರಗಳನ್ನು ನೀಡಿದ್ದಾರೆ.

2021ರಲ್ಲಿ ನಡೆಯಬೇಕಾಗಿದ್ದ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯನ್ನು ಯಾವಾಗ ಮಾಡಲಾಗುವುದು ಎನ್ನುವ ಮಾಹಿತಿಯನ್ನು ಗೃಹ ಸಚಿವರು ನೀಡಲಿಲ್ಲ. 2021ರ ಜನಗಣತಿಯ ಮೊದಲ ಹಂತವು 2020ರ ಎಪ್ರಿಲ್ನಿಂದ ಸೆಪ್ಟಂಬರ್ವರೆಗಿನ ಅವಧಿಯಲ್ಲಿ ನಡೆಯಬೇಕಾಗಿತ್ತು. ಈ ಹಂತದಲ್ಲಿ ಮನೆಗಳ ಗಣತಿ ಮಾಡಬೇಕಾಗಿತ್ತು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಪರಿಷ್ಕರಿಸಬೇಕಾಗಿತ್ತು.

ಆದರೆ, ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಅದನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು.

Similar News