ಐಪಿಎಲ್: ಗುಜರಾತ್‌ಗೆ ಸೋಲುಣಿಸಿ 10ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟ ಚೆನ್ನೈ ಕಿಂಗ್ಸ್

ಋತುರಾಜ್ ಗಾಯಕ್ವಾಡ್ ಅರ್ಧಶತಕ

Update: 2023-05-23 18:09 GMT

 ಚೆನ್ನೈ, ಮೇ 23: ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅರ್ಧಶತಕ(60 ರನ್, 44 ಎಸೆತ, 7 ಬೌಂಡರಿ, 1 ಸಿಕ್ಸರ್), ರವೀಂದ್ರ ಜಡೇಜ(2-18) ನೇತೃತ್ವದಲ್ಲಿ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಆಲ್‌ರೌಂಡ್ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯವನ್ನು 15 ರನ್ ಅಂತರದಿಂದ ಗೆದ್ದುಕೊಂಡಿದೆ.ಈ ಮೂಲಕ ಚೆನ್ನೈ ತಂಡವು 10ನೇ ಬಾರಿ ಐಪಿಎಲ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಈ ಪಂದ್ಯದಲ್ಲಿ ಸೋಲುಂಡಿರುವ ಗುಜರಾತ್‌ಗೆ ಫೈನಲ್ ತಲುಪಲು ಮತ್ತೊಂದು ಅವಕಾಶವಿದೆ. ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.

ಮಂಗಳವಾರ ಗೆಲ್ಲಲು 173 ರನ್ ಗುರಿ ಬೆನ್ನಟ್ಟಿದ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 157 ರನ್ ಗಳಿಸಿ ಆಲೌಟಾಯಿತು. ಗುಜರಾತ್ ಪರ ಶುಭಮನ್ ಗಿಲ್(42 ರನ್, 38 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ರಶೀದ್ ಖಾನ್(30 ರನ್, 16 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರು.

ಚೆನ್ನೈ ಪರ ಜಡೇಜ, ಮಹೀಶ್ ತೀಕ್ಷಣ(2-28), ದೀಪಕ್ ಚಹಾರ್(2-29) ಹಾಗೂ ಮಥೀಶ ಪಥಿರಣ(2-37) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ತುಷಾರ್ ದೇಶಪಾಂಡೆ(1-43) 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ್ಟ ಚೆನ್ನೈ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿತು.

ಚೆನ್ನೈಗೆ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೇ(40 ರನ್, 34 ಎಸೆತ, 4 ಬೌಂಡರಿ)10.3 ಓವರ್‌ಗಳಲ್ಲಿ 87 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಚೆನ್ನೈನ ಮಧ್ಯಮ ಸರದಿಯ ಬ್ಯಾಟರ್‌ಗಳು ವೈಫಲ್ಯ ಕಂಡರು. ಸಿಎಸ್‌ಕೆ ಅಂತಿಮ 3 ಓವರ್‌ಗಳಲ್ಲಿ 35 ರನ್ ಕಲೆ ಹಾಕಿತು.

ರವೀಂದ್ರ ಜಡೇಜ(22 ರನ್, 16 ಎಸೆತ)ಮಿಂಚಿನ ಬ್ಯಾಟಿಂಗ್‌ನ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಮುಹಮ್ಮದ್ ಶಮಿ ಕೊನೆಯ ಓವರ್‌ನಲ್ಲಿ 15 ರನ್ ನೀಡಿದರು. ಅಜಿಂಕ್ಯ ರಹಾನೆ(17ರನ್) ಹಾಗೂ ಅಂಬಟಿ ರಾಯುಡು(17 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಮುಹಮ್ಮದ್ ಶಮಿ(2-28) ಹಾಗೂ ಮೋಹಿತ್ ಶರ್ಮಾ(2-31)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ರಶೀದ್ ಖಾನ್(1-37), ನೂರ್ ಅಹ್ಮದ್(1-29) ಹಾಗೂ ದರ್ಶನ್ ನಲಕಂಡೆ(1-44)ತಲಾ 1 ವಿಕೆಟ್‌ಗಳನ್ನು ಪಡೆದರು.

Similar News