ಜಗತ್ತು ಮುಂದಿನ ಸಾಂಕ್ರಾಮಿಕವನ್ನು ಎದುರಿಸಲು ಸಜ್ಜಾಗಬೇಕಿದೆ: WHO ಮುಖ್ಯಸ್ಥ

Update: 2023-05-24 06:21 GMT

ಜಿನಿವಾ: ಜಗತ್ತಿನಾದ್ಯಂತ ಕೋವಿಡ್-19 ಪ್ರಕರಣಗಳು ಸ್ಥಿರವಾಗುತ್ತಿರುವ ಬೆನ್ನಿಗೇ ಕೋವಿಡ್-19 ಸಾಂಕ್ರಾಮಿಕಕ್ಕಿಂತಲೂ ಮಾರಕವಾದ ಸಾಂಕ್ರಾಮಿಕವನ್ನು ಎದುರಿಸಲು ಜಗತ್ತು ಸಜ್ಜಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಡ್ಹನೋಮ್ ಘೆಬ್ರರೆಯೆಸಸ್ ಎಚ್ಚರಿಕೆ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.

76ನೇ ಆರೋಗ್ಯ ಸದನದಲ್ಲಿ ತಮ್ಮ ವರದಿಯನ್ನು ಮಂಡಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಮೇಲಿನಂತೆ ಎಚ್ಚರಿಕೆ ನೀಡಿದ್ದಾರೆ.

"ಕೋವಿಡ್-19 ಸಾಂಕ್ರಾಮಿಕದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯ ಅಂತ್ಯವೆಂದರೆ ಕೋವಿಡ್-19 ಜಾಗತಿಕ ಆರೋಗ್ಯ ಅಪಾಯದ ಅಂತ್ಯವೆಂದಲ್ಲ" ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಮತ್ತೊಂದು ಮಾದರಿಯ ವೈರಸ್ ಕಾಣಿಸಿಕೊಳ್ಳುತ್ತಿದ್ದು, ಅದರಿಂದ ಹೊಸ ಬಗೆಯ ರೋಗಗಳು ಕಾಣಿಸಿಕೊಂಡು ಸಾವುಗಳು ಸಂಭವಿಸಲಿವೆ. ಹಾಗೆಯೇ ಮತ್ತಷ್ಟು ಮಾರಣಾಂತಿಕ ಸಾಮರ್ಥ್ಯವಿರುವ ರೋಗಕಾರಕ ವೈರಸ್ ಕೂಡಾ ಕಾಣಿಸಿಕೊಳ್ಳಲಿದೆ" ಎಂದು ಟೆಡ್ರೋಸ್ ವಿವರಿಸಿದ್ದಾರೆ.

ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಹಾಗೂ ಬದಲಾಗುತ್ತಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ "ಸಾಂಕ್ರಾಮಿಕಗಳು ಮಾತ್ರ ಮುಂದೆ ನಾವು ಎದುರಿಸಲಿರುವ ಅಪಾಯಗಳಾಗಿವೆ" ಎಂದೂ ಹೇಳಿದ್ದಾರೆ. ಎಲ್ಲ ಬಗೆಯ ತುರ್ತು ಪರಿಸ್ಥಿತಿಗಳನ್ನು ಎದುರುಗೊಳ್ಳಲು ಹಾಗೂ ಪ್ರತಿಸ್ಪಂದಿಸಲು ಪರಿಣಾಮಕಾರಿ ಜಾಗತಿಕ ಯಾಂತ್ರಿಕತೆಗೆ ಗಮನ ನೀಡಬೇಕಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

"ಮುಂದಿನ ಸಾಂಕ್ರಾಮಿಕವು ನಮ್ಮ ಬಾಗಿಲು ಬಡಿದಾಗ ನಾವು ನಿರ್ಣಾಯಕ, ಸಾಮೂಹಿಕ ಹಾಗೂ ಸಮಾನವಾಗಿ ಉತ್ತರ ನೀಡಲು ಸಿದ್ಧವಾಗಿರಬೇಕಿದೆ" ಎಂದೂ ಟೆಡ್ರೋಸ್ ಕರೆ ನೀಡಿದ್ದಾರೆ.

Similar News