ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ ನೀಡದಿರುವುದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ: ರಾಹುಲ್ ಗಾಂಧಿ

"ಸಂಸತ್ತನ್ನು ಅಹಂಕಾರದ ಇಟ್ಟಿಗೆಗಳಿಂದಲ್ಲ, ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಿಸಲಾಗಿದೆ"

Update: 2023-05-24 09:59 GMT

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನ ಉದ್ಘಾಟನೆಗೆ ಕರೆತರದಿರುವುದು ಅಥವಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸತ್ತನ್ನು ಅಹಂಕಾರದ ಇಟ್ಟಿಗೆಗಳಿಂದ ನಿರ್ಮಿಸಲಾಗಿಲ್ಲ ಆದರೆ ಸಾಂವಿಧಾನಿಕ ಮೌಲ್ಯಗಳ ಮೂಲಕ ನಿರ್ಮಿಸಲಾಗಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್  ಹೇಳಿದರು.

ಕಾಂಗ್ರೆಸ್, ಎಡಪಕ್ಷಗಳು, ಎಎಪಿ ಹಾಗೂ  ಟಿಎಂಸಿ ಸೇರಿದಂತೆ 19 ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಸತ್ತಿನ ಸಂಕೀರ್ಣದ ಉದ್ಘಾಟನೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಘೋಷಿಸಿದ ನಂತರ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದ ಆತ್ಮವನ್ನು ಸಂಸತ್ತಿನಿಂದ ಹೊರ ಹಾಕಲಾಗಿದೆ.  ಹೀಗಾಗಿ ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯಗಳು  ಕಾಣುವುದಿಲ್ಲ ಎಂದು ಹೇಳಿದರು.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ರಾಷ್ಟ್ರಪತಿಗಳಿಗೆ ಸಂಸತ್ತಿನ ಉದ್ಘಾಟನೆಗೆ ಅವಕಾಶ ನೀಡದಿರುವುದು ಅಥವಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ" ಎಂದು ಹೇಳಿದ್ದಾರೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಮೇ 28 ರಂದು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

Similar News