×
Ad

ದೈವಿಕ ಗ್ರಂಥದ ಮೇಲೆ ಯಾವುದೇ ಸಮುದಾಯವು ಏಕಸ್ವಾಮ್ಯ ಹೊಂದಿಲ್ಲ ಎಂಬ ಸಂದೇಶ ರವಾನಿಸಿದ ಕುರ್ ಆನ್ ಕುರಿತ ಸಭೆ

Update: 2023-05-24 18:08 IST

ಮುಂಬೈ: ಉತ್ತರ ಪ್ರದೇಶದ ಕೈರಾನಾದ ಅಲ್-ಕುರ್ ಆನ್ ಅಕಾಡೆಮಿಯು ದಿಲ್ಲಿಯ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ (ಐಐಸಿಸಿ)ನ ಸಹಭಾಗಿತ್ವದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕುರ್ ಆನ್ ಮೀಟ್-2023 ಶಾಂತಿ, ನ್ಯಾಯ ಮತ್ತು ಸೌಹಾರ್ದದ ಕುರ್ ಆನ್ ನ ಸಾರ್ವತ್ರಿಕ ಸಂದೇಶವನ್ನು ಕರಾರುವಾಕ್ ಆಗಿ ಮತ್ತು ಸುಂದರವಾಗಿ ಬಿತ್ತರಿಸಿದೆ.

ಐದು ವರ್ಷಗಳಷ್ಟು ಹಳೆಯದಾದ ಅಕಾಡೆಮಿಯ ವಿದ್ಯಾರ್ಥಿಗಳು ಐಐಸಿಸಿಯ ಕಿಕ್ಕಿರಿದು  ತುಂಬಿದ್ದ ಸಭಾಂಗಣದಲ್ಲಿ ಪ್ರಸ್ತುತ ಪಡಿಸಿದ ಪ್ರದರ್ಶನಗಳು, ಕುರ್ ಆನ್ ಸೃಷ್ಟಿಕರ್ತನು ಬೆಳಕಿಗೆ ತಂದಿರುವ ಪದಗಳನ್ನು ಒಳಗೊಂಡಿದೆ ಮತ್ತು ಗ್ರಂಥವು ಒಂದು ಸಮುದಾಯಕ್ಕೆ ಅಥವಾ ಒಂದು ಯುಗಕ್ಕೆ ಅಥವಾ ಸಮಯಕ್ಕೆ ಸೀಮಿತವಾಗಿಲ್ಲ ಎನ್ನುವ ಅಂಶಗಳನ್ನು ಮನಮುಟ್ಟುವಂತೆ ಬಿಂಬಿಸಿದವು. ದೇವರು ಮಾನವೀಯತೆಯನ್ನು ‘ಮನುಕುಲವೇ’ ಎಂದು ಸಂಬೋಧಿಸುತ್ತಾನೆಯೇ ಹೊರತು ‘ಓ ಮುಸ್ಲಿಮರೇ’ ಎಂದಲ್ಲ ಎನ್ನುವುದು ದೈವಿಕ ಮಾರ್ಗದರ್ಶನವು ಇಡೀ ಮನುಕುಲಕ್ಕಾಗಿದೆಯೇ ಹೊರತು ಕೇವಲ ಮುಸ್ಲಿಮರಿಗಲ್ಲ ಎಂದು ಒತ್ತಿ ಹೇಳುತ್ತದೆ.

ಸಮ್ಮೇಳನದ ವಿಷಯ ‘ಕುರ್ ಆನ್ ಬಿಯಾಂಡ್ ರಿಲಿಜನ್: ಡಿಸ್ಕವರಿಂಗ್ ಕುರ್ಆನ್ಸ್ ಯೂನಿವರ್ಸಲ್ ಥೀಮ್ಸ್’ ಅನ್ನು ವಿವರಿಸಿದ ಅಲ್-ಕುರ್ ಆನ್ ಅಕಾಡೆಮಿಯ ಸ್ಥಾಪಕಾಧ್ಯಕ್ಷ ಮುಫ್ತಿ ಅಥರ್ ಶಮ್ಸಿ ಅವರು, ಕುರ್ ಆನ್ ನ ಸಾರ್ವತ್ರಿಕ ಸಂದೇಶವನ್ನು ವಿಶಾಲ ಮನುಕುಲಕ್ಕೆ ತಲುಪಿಸುವಲ್ಲಿ ಮುಸ್ಲಿಮರು ವಿಫಲಗೊಂಡಿದ್ದಾರೆ ಎಂದು ಹೇಳಿದರು.

‘‘ಕುರ್ ಆನ್ ನ ಸಂದೇಶವನ್ನು ಜಾಗತಿಕ ದೃಷ್ಟಿಕೋನದಲ್ಲಿ ನೋಡುವುದು ಅಗತ್ಯವಾಗಿದೆ. ಕುರ್ ಆನ್ ಒಳಗೊಂಡಿರುವ ದೇವರ ಸಂದೇಶವು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಕುರ್ ಆನ್ ಇಡೀ ಮಾನವ ಕುಲದ ಸಮಸ್ಯೆಗಳನ್ನು ಬಗೆಹರಿಸುವುದರಿಂದ ನಮ್ಮ ನೋಟವು ‘ಓ ಮನುಕುಲವೇ ’ಎಂದು ಆಗಿರಬೇಕು ’’ ಎಂದು ಹೇಳಿದ ಶಮ್ಸಿ, ‘ಇದೇ ಉದ್ದೇಶದೊಂದಿಗೆ ನಾವು ಈ ಸಭೆಯನ್ನು ಆಯೋಜಿಸಿದ್ದೇವೆ. ಕುರ್ ಆನ್ ನ ಮಾರ್ಗದರ್ಶನದ ಬೆಳಕಿನಲ್ಲಿ ಸಮಸ್ಯೆಗಳನ್ನು ನಿಭಾಯಿಸುವ ತಜ್ಞರ ಮುಂದಿನ ಪೀಳಿಗೆಯನ್ನು ಅಕಾಡೆಮಿಯು ಹೇಗೆ ಸಜ್ಜುಗೊಳಿಸುತ್ತದೆ ಎನ್ನುವುದನ್ನು ಪ್ರದರ್ಶಿಸಲು ನಾವು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದೇವೆ’ ಎಂದರು.

ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ಸಮುದ್ರ ಮಟ್ಟಗಳಲ್ಲಿ ಏರಿಕೆಯಂತಹ ಸಮಸ್ಯೆಗಳ ಬಗ್ಗೆ ಮಾತನಾಡಲು ಜಗತ್ತು ಆರಂಭಿಸುವ ಮುನ್ನ,1400 ವರ್ಷಗಳ ಹಿಂದೆಯೇ ಕುರ್ ಆನ್ ಈ ವಿಷಯಗಳ ಬಗ್ಗೆ ಚರ್ಚಿಸಿತ್ತು ಎಂದು ಹೇಳಿದ ಶಮ್ಸಿ, ಕುರ್ ಆನ್ ಮೇಲೆ ಯಾವುದೇ ಸಮುದಾಯವು ಏಕಸ್ವಾಮ್ಯವನ್ನು ಹೊಂದಿಲ್ಲ. ಸರ್ವರ ಹಿತಾಸಕ್ತಿಯ ದೃಷ್ಟಿಯಿಂದ ಕುರ್ ಆನ್ ಜಾಗತಿಕ ಸಮುದಾಯಕ್ಕೆ ಮಾರ್ಗದರ್ಶನವನ್ನು ನೀಡುವ ಗ್ರಂಥವಾಗಿದೆ, ಅದು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಮತ್ತು ಅದು ಕೇವಲ ಧಾರ್ಮಿಕ ಗ್ರಂಥವಲ್ಲ ಎಂದು ಅರ್ಥೈಸಲ್ಪಟ್ಟಿದೆ ಎಂದು ಹೇಳಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಇರಾನ್ ರಾಯಭಾರಿ ಕಚೇರಿಯ ಸಾಂಸ್ಕೃತಿಕ ಸಲಹೆಗಾರ ಡಾ.ಎಫ್.ಫರೀದಾಸರ್ ಅವರು, ಅಕಾಡೆಮಿಯು ಇಂತಹ ಮಹತ್ವದ ಉಪಕ್ರಮವನ್ನು ಕೈಗೊಂಡಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.

ಇಡೀ ಮಾನವಕುಲವು ಓರ್ವ ಪುರುಷ ಮತ್ತು ಮಹಿಳೆಯಿಂದ ಸೃಷ್ಟಿಯಾಗಿದೆ ಹಾಗೂ ಭಿನ್ನಾಭಿಪ್ರಾಯಗಳು ತಮ್ಮನ್ನು ಗುರುತಿಸಿಕೊಳ್ಳಲು ಮಾತ್ರ ಎಂಬ ಕುರ್ ಆನ್ ನ ಆಣತಿಯನ್ನು ಪುನರುಚ್ಚರಿಸಿದ ಅವರು, ವಿದ್ಯಾರ್ಥಿಗಳು ಕುರ್ ಆನ್ ನ ಆಜ್ಞೆಗಳು ಮತ್ತು ಪ್ರವಾದಿಯವರ ಸಂದೇಶದ ಸಾರವನ್ನು ಅಡಕವಾಗಿಸಿಕೊಂಡು ಕುರ್ ಆನ್ ನ ಸಂದೇಶವನ್ನು ಉದಾತ್ತ ಶೈಲಿಯಲ್ಲಿ ಮಂಡಿಸಿರುವುದು ಹರ್ಷವನ್ನು ತಂದಿದೆ ಎಂದರು. ಕುರ್ ಆನ್ 241 ಸಲ ಜನರನ್ನು ಉದ್ದೇಶಿಸಿದಾಗ 20 ಸಲ ‘ಓ ಮನುಕುಲವೇ ’ಎಂದು ಉಲ್ಲೇಖಿಸಿದೆ ಎಂದು ಅವರು ಹೇಳಿದರು.

Similar News