ಹಿರಿಯ ಅಧಿಕಾರಿಗಳಿಂದ ಪ್ರೇರಣೆ: UPSC ಪರೀಕ್ಷೆಯಲ್ಲಿ 667ನೇ ರ‍್ಯಾಂಕ್ ಪಡೆದ ಪೊಲೀಸ್ ಪೇದೆ
ಹೊಸದಿಲ್ಲಿ: ಹಿರಿಯ ಪೊಲೀಸ್ ಅಧಿಕಾರಿಯಿಂದ ಸ್ಫೂರ್ತಿಗೊಂಡ ದಿಲ್ಲಿ ಮುಖ್ಯ ಪೊಲೀಸ್ ಪೇದೆಯೊಬ್ಬರು ಮಂಗಳವಾರ ಪ್ರಕಟವಾದ ಯುಪಿಎಸ್‍ಸಿ ಪರೀಕ್ಷೆಯಲ್ಲಿ 667ನೇ ರ‍್ಯಾಂಕ್ ಪಡೆಯುವ ಮೂಲಕ ತೇರ್ಗಡೆಯಾಗಿದ್ದಾರೆ.
34 ವರ್ಷ ವಯಸ್ಸಿನ ದಿಲ್ಲಿ ಮುಖ್ಯ ಪೊಲೀಸ್ ಪೇದೆ ರಾಮ್ ಭಜನ್ ಕುಮಾರ್ ಅವರು, ಯುಪಿಎಸ್‍ಸಿ ಫಲಿತಾಂಶ ಪ್ರಕಟವಾದ ನಂತರ ಹಲವು ಫೋನ್ ಕರೆ ಹಾಗೂ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ಅವರು ತಮ್ಮ ಕುಟುಂಬದ ಸದಸ್ಯರು, ಸಹದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳಿಂದ ಅಭಿನಂದೆಗಳ ಫೋನ್ ಕರೆ ಹಾಗೂ ಸಂದೇಶಗಳ ಸುರಿಮಳೆಯನ್ನೇ ಸ್ವೀಕರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಮ್ ಭಜನ್ ಕುಮಾರ್, “ನನ್ನ ಕನಸು ನನಸಾಗಿದೆ. ಇದು ನನ್ನ ಎಂಟನೆಯ ಪ್ರಯತ್ನವಾಗಿತ್ತು. ನಾನು ಇತರೆ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದವನಾಗಿದ್ದರಿಂದ ನಾನು ಒಂಬತ್ತು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿತ್ತು. ಈ ಬಾರಿಯದ್ದು ನನ್ನ ಕೊನೆಯ ಅವಕಾಶದ ಪೈಕಿ ಮೊದಲನೆಯದಾಗಿತ್ತು” ಎಂದು ಸಂತಸ ಹಂಚಿಕೊಂಡಿದ್ದಾರೆ.
“ನಾನು ಪರೀಕ್ಷೆ ತೆಗೆದುಕೊಳ್ಳುವುದರಿಂದ ಕಳೆದುಕೊಳ್ಳುವುದು ಏನೂ ಇರಲಿಲ್ಲ ಹಾಗೂ ನಾನು ರಾಜಸ್ತಾನದ ಗ್ರಾಮದಿಂದ ಬಂದಿದ್ದು, ಅಲ್ಲಿ ನನ್ನ ತಂದೆ ದಿನಗೂಲಿಯಾಗಿದ್ದಾರೆ. ನಮ್ಮನ್ನು ವಿದ್ಯಾವಂತರನ್ನಾಗಿಸಲು ಹಾಗೂ ನಮ್ಮ ದೈನಂದಿನ ಅಗತ್ಯವನ್ನು ಭರಿಸಲು ನನ್ನ ಕುಟುಂಬ ಪಟ್ಟ ಪಾಡನ್ನು ಕಣ್ಣಾರೆ ಕಂಡಿದ್ದೇನೆ. ನಾವು ಅಂದೂ ಭರವಸೆ ಕಳೆದುಕೊಂಡಿರಲಿಲ್ಲ. ಆದ್ದರಿಂದ ನನ್ನ ಕೈಯಲ್ಲಿ ಅವಕಾಶವಿದ್ದಾಗ, ಅದನ್ನು ಆದಷ್ಟೂ ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಚಿಂತಿಸಿದೆ” ಎಂದೂ ಅವರು ಹೇಳಿಕೊಂಡಿದ್ದಾರೆ.
ನನ್ನ ಇಂದಿನ ಯಶಸ್ಸಿಗೆ ಪತ್ನಿಯ ಪ್ರೋತ್ಸಾಹವೇ ಕಾರಣ ಎಂದು ಹೇಳಿಕೊಂಡಿರುವ ರಾಮ್ ಭಜನ್ ಕುಮಾರ್, ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿದ್ದ ಫಿರೋಝ್ ಅಲಂ ಅವರು, 2019ರ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇದೀಗ ಸಹಾಯಕ ಪೊಲೀಸ್ ಆಯುಕ್ತರಾಗಿರುವುದು ನನ್ನ ಸಾಧನೆಗೆ ಪ್ರೇರಣೆಯಾಗಿತ್ತು ಎಂದೂ ಬಹಿರಂಗಗೊಳಿಸಿದ್ದಾರೆ.
2009ರಲ್ಲಿ ದಿಲ್ಲಿ ಪೊಲೀಸ್ ಇಲಾಖೆಯನ್ನು ಪೇದೆಯಾಗಿ ಸೇರ್ಪಡೆಗೊಂಡಿದ್ದ ರಾಮ್ ಭಜನ್ ಕುಮಾರ್, ಮೊದಲಿಗೆ ಸಿಪಿ ರಿಸರ್ವ್ ಬಳಿಯಿರುವ ವಿಜಯ್ ಘಾಟ್ ಠಾಣೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದ ನಂತರ ಅವರನ್ನು ಶಹಾಬಾದ್ ಡೈರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.