×
Ad

ಲ್ಯಾಂಡಿಂಗ್‌ ಆದ ತಕ್ಷಣವೇ ಟೇಕಾಫ್‌ ಆದ ಇಂಡಿಗೋ ವಿಮಾನ; ಗಾಬರಿಗೊಂಡ ಪ್ರಯಾಣಿಕರು

Update: 2023-05-24 19:12 IST

ವಡೋದರಾ/ಅಹಮದಾಬಾದ್: ಚಂಡೀಗಢದಿಂದ ಅಹಮದಾಬಾದ್‌ಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ ಇದ್ದಕ್ಕಿದ್ದಂತೆ ಟೇಕ್ ಆಫ್ ಆಗಿದ್ದು, ಪರಿಣಾಮ ಪ್ರಯಾಣಿಕರು ಭಯಭೀತಗೊಂಡ ಘಟನೆ ವರದಿಯಾಗಿದೆ. 

"ವಿಮಾನವು ರಾತ್ರಿ 8.45 ರ ಸುಮಾರಿಗೆ ಇಳಿಯಲು ಪ್ರಾರಂಭಿಸಿತು, ಆದರೆ ಚಕ್ರಗಳು ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ, ಹಠಾತ್‌ ಆಗಿ ಟೇಕಾಫ್‌ ಆಗಿದ್ದು, ಲ್ಯಾಂಡ್‌ ಆದ ವಿಮಾನವು ಮತ್ತೊಮ್ಮೆ ಗಾಳಿಯಲ್ಲಿ ಹಾರಿದೆ. ಲ್ಯಾಂಡಿಂಗ್ ಆಗುತ್ತಿದ್ದ ವಿಮಾನ ಏನಾಏಕಿ ಟೇಕ್ ಆಫ್ ಆದ್ದರಿಂದ ಎಲ್ಲರೂ ಭಯಭೀತಿಗೊಂಡರು." ಎಂದು ವಿಮಾನದಲ್ಲಿದ್ದ ಪ್ರಯಾಣಿಕ, ವಡೋದರಾ ನಿವಾಸಿ ಡಾ ನೀಲ್ ಠಕ್ಕರ್ ಅವರು timesofindia ಗೆ ತಿಳಿಸಿದ್ದಾರೆ.

ಲ್ಯಾಂಡಿಂಗ್ ನಂತರ ಪೈಲಟ್‌ನೊಂದಿಗೆ ಘಟನೆಯ ಬಗ್ಗೆ ವಿಚಾರಿಸಿರುವುದಾಗಿ ನೀಲ್‌ ಠಕ್ಕರ್‌ ಹೇಳಿದ್ದಾರೆ. ಠಕ್ಕರ್‌ ಪ್ರಶ್ನೆಗೆ ಪ್ರತಿಕ್ರಿಯಿಸಿರುವ, ಪೈಲಟ್ ಜಗದೀಪ್ ಸಿಂಗ್, ಇದು ಸಂವಹನ ಸಮಸ್ಯೆಯಾಗಿದೆ. ವಿಮಾನವನ್ನು ಇಳಿಸಲು ವಿಮಾನಯಾನ ಸಂಸ್ಥೆಯು ಎಟಿಸಿ ಕ್ಲಿಯರೆನ್ಸ್ ಹೊಂದಿರಲಿಲ್ಲ, ಹಾಗಾಗಿ ಗೊಂದಲ ಉಂಟಾಗಿದೆ ಎಂದು ಅವರು ತಿಳಿಸಿರುವುದಾಗಿ ಠಕ್ಕರ್‌ ಹೇಳಿದ್ದಾರೆ. 

ಅದೇ ವಿಮಾನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ತೇಜಸ್ ಜೋಶಿ ಟ್ವೀಟ್ ಮಾಡಿ, "ಇಂದು, ಚಂಡೀಗಢದಿಂದ ಅಹಮದಾಬಾದ್‌ಗೆ ಹೋಗುವ 6E 6056 ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ವಿಮಾನವು ರನ್‌ವೇ ತಲುಪಿ ಮತ್ತೊಮ್ಮೆ ಟೇಕ್ ಆಫ್ ಆಗಿದೆ. ಪ್ರಯಾಣಿಕರು ಭಯಭೀತಗೊಂಡರು." ಎಂದು ಬರೆದಿದ್ದಾರೆ.

Similar News