2,000 ನೋಟು ವಿನಿಮಯ ಹಲವು ರಾಜ್ಯಗಳಲ್ಲಿ ಆರಂಭ

Update: 2023-05-24 17:16 GMT

ಹೊಸದಿಲ್ಲಿ, ಮೇ 24: ಹೆಚ್ಚಿನ ಬ್ಯಾಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸಿರುವುದರಿಂದ ಹಾಗೂ 2016ರ ನೋಟು ಅಮಾನ್ಯೀಕರಣದ ಬಳಿಕ ಕಂಡುಬಂದಂತೆ ಹೆಚ್ಚಿನ ಜನಸಂದಣಿ ಇಲ್ಲದೇ ಇದ್ದುದರಿಂದ 2000 ರೂ. ನೋಟು ವಿನಿಮಯ ಮೊದಲ ದಿನವಾದ ಮಂಗಳವಾರ ನಿಧಾನಗತಿಯಲ್ಲಿ ಆರಂಭವಾಯಿತು.

ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಒಡಿಶಾ ಹಾಗೂ ತೆಲಂಗಾಣದಲ್ಲಿ ನೋಟುಗಳ ವಿನಿಮಯ ನಿಧಾನವಾಗಿ ನಡೆಯಿತು. ಇಲ್ಲಿನ ಜನರು ನೋಟನ್ನು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ಗೆ ಆಗಮಿಸಲು ಬಯಸಲಿಲ್ಲ. ದಿಲ್ಲಿ, ಚೆನ್ನೈ, ಹೈದರಾಬಾದ್ ಹಾಗೂ ವಿಜಯವಾಡದ ನಿವಾಸಿಗಳು ನೋಟುಗಳನ್ನು ಪೆಟ್ರೋಲ್ ಪಂಪ್, ಸೂಪರ್ ಮಾರ್ಕೆಟ್ ಹಾಗೂ ಇತರ ಉದ್ಯಮ ಸಂಸ್ಥೆಗಳಲ್ಲಿ ವಿಲೇವಾರಿ ಮಾಡಲು ಪ್ರಯತ್ನಿಸಿದರು. ಯಾವುದೇ ರಾಜ್ಯಗಳಲ್ಲಿ ಅಹಿತರಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. 

ದಿಲ್ಲಿ, ಚೆನ್ನೈ ಹಾಗೂ ಭುನೇಶ್ವರದ ಕೆಲವು ಬ್ಯಾಂಕ್ ಶಾಖೆಗಳಲ್ಲಿ ಗೊಂದಲಗಳು ಉಂಟಾಗಿರುವ ಬಗ್ಗೆ ವರದಿಯಾಗಿದೆ. ನೋಟುಗಳ ವಿನಿಮಯಕ್ಕೆ ಯಾವುದೇ ದಾಖಲೆಗಳ ಅಗತ್ಯ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದರೂ ಗುರುತು ದಾಖಲೆ ಇಲ್ಲದೆ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ ಆರೋಪದಲ್ಲಿ ದಿಲ್ಲಿಯ ಕೆಲವು ಬ್ಯಾಂಕ್ಗಳಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ತೀವ್ರ ವಾಗ್ವಾದ ನಡೆದ ಬಗ್ಗೆ ವರದಿಯಾಗಿದೆ. ಚೆನ್ನೈಯ ಕೆಲವು ಬ್ಯಾಂಕ್ಗಳು ಕೂಡ ನೋಟುಗಳ ವಿನಿಮಯಕ್ಕೆ ಆಗಮಿಸಿದ ಗ್ರಾಹಕರಲ್ಲಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಕೇಳಿದೆ. ಇಲ್ಲಿನ ಪೆಟ್ರೋಲ್ ಪಂಪ್ಗಳಲ್ಲಿ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿವೆ. 

ಆಭರಣ ಅಂಗಡಿಗಳಲ್ಲಿ ಜನಸಂದಣಿ ಕಂಡು ಬರಲಿಲ್ಲ. ಹೆಚ್ಚಿನ ಆಭರಣದ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಲವರು ಹಣವನ್ನು 2000 ರೂ. ನೋಟಿನಲ್ಲಿ ಪಾವತಿಸಿದರು ಎಂದು ತೆಲಂಗಾಣ ಹಾಗೂ ಕರ್ನಾಟಕದ ಕೆಲವು ವಜ್ರೋದ್ಯಮಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಬ್ಯಾಂಕ್ಗಳಿಗಿಂತ ಪೆಟ್ರೋಲ್ ಸ್ಟೇಷನ್, ಜುವೆಲ್ಲರಿ, ಮಾಲ್ ಹಾಗೂ ಸ್ಟೋರ್ಗಳಲ್ಲಿ ನೋಟುಗಳನ್ನು ವಿಲೇವಾರಿ ಮಾಡಿಕೊಳ್ಳಲು ಜನಸಂದಣಿ ಕಂಡು ಬಂತು. ಕೇರಳದಲ್ಲಿ ನೋಟುಗಳ ವಿನಿಮಯ ನಿಧಾನವಾಗಿ ಆರಂಭವಾಯಿತು. 

ಕೆಲವರು ಮಾತ್ರ ಬ್ಯಾಂಕ್ಗಳಿಗೆ ಆಗಮಿಸಿ ನೋಟಗಳನ್ನು ವಿನಿಮಯ ಮಾಡಿಕೊಂಡರು. ಚೆನ್ನೈಯ ಜನವಸತಿ ಪ್ರದೇಶದಲ್ಲಿರುವ ಬ್ಯಾಂಕ್ ಶಾಖೆಗಳಲ್ಲಿ ನೋಟು ವಿನಿಮಯ ಮಾಡಿಕೊಳ್ಳಲು ಕೆಲವೇ ಕೆಲವು ಜನರು ಆಗಮಿಸಿರುವುದರಿಂದ ನಿರ್ಜನವಾಗಿತ್ತು. ಪುರುಸವಲ್ಕಂ,, ವೆಪೆರಿ ಹಾಗೂ ಇತರ ವಾಣಿಜ್ಯ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯ ಜನರು ಬ್ಯಾಂಕ್ ಶಾಖೆಗಳಿಗೆ ನೋಟು ವಿನಿಮಯ ಹಾಗೂ ಠೇವಣಿ ಮಾಡಲು ಆಗಮಿಸಿದರು. 10ಕ್ಕಿಂತ ಕಡಿಮೆ ಜನರು ಮಾತ್ರ ನೋಟು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ಗೆ ಆಗಮಿಸಿದ್ದಾರೆ. 

ಬ್ಯಾಂಕ್ನವರು ಅವರ ಆಧಾರ್ ಕಾರ್ಡ್ ಹಾಗೂ ಗುರುತು ಚೀಟಿಯನ್ನು ಸಂಗ್ರಹಿಸಿದರು. ಇತರ ನಗರಗಳಿಗಿಂತ ಭಿನ್ನವಾಗಿ ದಿಲ್ಲಿಯ ಬ್ಯಾಂಕ್ಗಳಲ್ಲಿ ನೋಟು ವಿನಿಮಯ ಮಾಡಿಕೊಳ್ಳಲು ಹೆಚ್ಚಿನ ಜನರು ಆಗಮಿಸಿದರು. ನೋಟು ವಿನಿಮಯ ಹಾಗೂ ಠೇವಣಿ ಕುರಿತು ಗ್ರಾಹಕರಲ್ಲಿ ಗೊಂದಲಗಳು ಇದ್ದುವು. ಸರಿಯಾದ ಮಾಹಿತಿ ನೀಡದ ಹಾಗೂ ಗುರುತು ಚೀಟಿ ಆಗ್ರಹಿಸಿದ ಹಿನ್ನೆಲೆಯಲ್ಲಿ ಕೆಲವು ಶಾಖೆಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ನಡುವೆ ಘರ್ಷಣೆ ನಡೆಯಿತು. ಆಂಧ್ರಪ್ರದೇಶದಲ್ಲಿ ನೋಟು ವಿನಿಮಯ ಮಾಡಿಕೊಳ್ಳಲು ಜನ ನಿಬಿಡತೆ ಕಂಡು ಬರಲಿಲ್ಲ. ಜನರು ಪೆಟ್ರೋಲ್ ಪಂಪ್, ಆಭರಣದ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ನೋಟುಗಳನ್ನು ವಿಲೇವಾರಿ ಮಾಡಲು ಪ್ರಯತ್ನಿಸಿದರು.

Similar News