ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ಆಸ್ಪತ್ರೆಗೆ ದಾಖಲು

Update: 2023-05-26 02:48 GMT

ಲಕ್ನೋ: ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ಅವರನ್ನು ಲಕ್ನೋದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್ ಬೆಂಬಲ ವ್ಯವಸ್ಥೆಯಲ್ಲಿದ್ದಾರೆ ಎಂದು ಅವರ ಕುಟುಂಬದವರು ಬಹಿರಂಗಪಡಿಸಿದ್ದಾರೆ.

ಮೂತ್ರಪಿಂಡದ ಕಲ್ಲು ಹೊರತೆಗೆಯುವ ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯಸ್ಥಿತಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ 70 ವರ್ಷ ವಯಸ್ಸಿನ ರಾಣಾ ಅವರನ್ನು ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪುತ್ರಿ ಸುಮಯ್ಯಾ ರಾಣಾ ಹೇಳಿದ್ದಾರೆ.

ಹಿರಿಯ ಕವಿ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಡಯಾಲಿಸಿಸ್ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಕಳೆದ ಮಂಗಳವಾರ ರಾಣ ಅವರಿಗೆ ಮೂತ್ರಪಿಂಡ ಕಲ್ಲು ಹೊರತೆಗೆಯುವ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದು ಸುಮಯ್ಯಾ ವಿವರಿಸಿದ್ದಾರೆ.

ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ಕರೆ ತಂದಾಗ ಮೂತ್ರಪಿಂಡ, ಕಲ್ಲುಗಳ ಕಾರಣದಿಂದ ಹಾನಿಗೀಡಾಗಿರುವುದು ಕಂಡುಬಂದಿದೆ. ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದರೂ, ಆ ಬಳಿಕ ಅವರ ಆರೋಗ್ಯಸ್ಥಿತಿ ಕ್ಷೀಣಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಯಬರೇಲಿಯಲ್ಲಿ ಜನಿಸಿದ ಮುನಾವ್ವರ್ ರಾಣಾ 2014ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಮುಶೈರಾ ವಲಯದಲ್ಲಿ ಚಿರಪರಿಚಿತ ಹೆಸರಾಗಿರುವ ರಾಣಾ, ಹಿಂದಿ ಮತ್ತು ಉರ್ದು ಎರಡೂ ಭಾಷೆಗಳಲ್ಲಿ ಜನಪ್ರಿಯ ಕವಿ. ತಾಯಿಯ ಬಣ್ಣನೆಯ ಅವರ ’ಮಾ’ ಅವರಿಗೆ ಅತ್ಯಂತ ಹೆಗ್ಗಳಿಕೆ ತಂದುಕೊಟ್ಟ ಕವಿತೆ.

Similar News