ಬಂಪರ್ ಬೆಳೆ: ದಾಖಲೆ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ

Update: 2023-05-26 03:11 GMT

ಹೊಸದಿಲ್ಲಿ: ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲಿ ಅಕಾಲಿಕ ಮಳೆಯಾದರೂ, ದೇಶದ ಪ್ರಸಕ್ತ ಸಾಲಿನ ಆಹಾರ ಧಾನ್ಯ ಉತ್ಪಾದನೆ ದಾಖಲೆ 330 ದಶಲಕ್ಷ ಟನ್ ತಲುಪಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಇದು ಕಳೆದ ವರ್ಷ ಉತ್ಪಾದನೆಯಾದ ಪ್ರಮಾಣಕ್ಕೆ ಹೋಲಿಸಿದರೆ 13 ದಶಲಕ್ಷ ಮೆಟ್ರಿಕ್ ಟನ್‌ನಷ್ಟು (ಶೇಕಡ 4) ಅಧಿಕ. ಪ್ರತಿಕೂಲ ಹವಾಮಾನ ಗೋಧಿ ಉತ್ಪಾದನೆಯ ಮೇಲೆ ದೊಡ್ಡ ಪರಿಣಾಮವನ್ನೇನೂ ಬೀರಿಲ್ಲ. ಪ್ರಮುಖ ಬೇಳೆಕಾಳುಗಳ ಉತ್ಪಾದನೆ ಕೂಡಾ ದಾಖಲೆ 113 ದಶಲಕ್ಷ ಟನ್ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.

ದೇಶದಲ್ಲಿ ಬೇಸಿಗೆ ಬೆಳೆ ಆರಂಭಕ್ಕೆ ಮುನ್ನ ಮಾಡಿದ್ದ ಅಂದಾಜಿಗಿಂತ ಸುಮಾರು ಎರಡು ದಶಲಕ್ಷ ಟನ್‌ನಷ್ಟು ಹೆಚ್ಚುವರಿ ಉತ್ಪಾದನೆ ಆಗಲಿದೆ. 2022ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ವೇಳೆ ಉತ್ತಮ ಮಳೆಯಾಗಿರುವುದು ಇದಕ್ಕೆ ಕಾರಣ.

2022-23ನೇ ಬೆಳೆ ವರ್ಷದ (2022ರ ಜುಲೈನಿಂದ 2023ರ ಜೂನ್)ಮೂರನೇ ಅಂದಾಜನ್ನು ಕೃಷಿ ಇಲಾಖೆ ಗುರುವಾರ ಬಿಡುಗಡೆ ಮಾಡಿದ್ದು, ಭತ್ತ, ಗೋಧಿ ಹಾಗೂ ಮೆಕ್ಕೆಜೋಳ ದಾಖಲೆ ಉತ್ಪಾದನೆಯಾಗಲಿದೆ. ಅಂತೆಯೇ ಬೇಳೆ ಕಾಳು ಹಾಗೂ ಪೌಷ್ಟಿಕಾಂಶಯುಕ್ತ ಬೇಳೆಕಾಳುಗಳು ಕೂಡ 2021-22ನೇ ಬೆಳೆ ವರ್ಷಕ್ಕೆ ಹೋಲಿಸಿದರೆ ಅಧಿಕ ಉತ್ಪಾದನೆ ದಾಖಲಿಸಿವೆ.

ಕೃಷಿಕರ ಕಠಿಣ ಪರಿಶ್ರಮದಿಂದ, ವಿಜ್ಞಾನಿಗಳ ವೃತ್ತಿಪರತೆಯಿಂದ ಮತ್ತು ಸರ್ಕಾರದ ರೈತಸ್ನೇಹಿ ನೀತಿಗಳಿಂದ ಕೃಷಿ ವಲಯ ದಿನದಿಂದ ದಿನಕ್ಕೆ ಪ್ರಗತಿಯಾಗುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಹೇಳಿದ್ದಾರೆ.

Similar News