ರಕ್ಷಣಾ ಸಾಧನ ವರ್ಗಾವಣೆ : ಯುಎಇ ಜತೆ ಜಪಾನ್ ಒಪ್ಪಂದ

Update: 2023-05-26 16:51 GMT

ಟೋಕಿಯೊ, ಮೇ 26: ರಕ್ಷಣಾ ಸಾಧನ, ತಂತ್ರಜ್ಞಾನ ವರ್ಗಾವಣೆಗೆ ಯುಎಇ ಮತ್ತು ಜಪಾನ್ ಒಪ್ಪಂದಕ್ಕೆ ಸಹಿ ಹಾಕಿದ್ದು ಇದು ಜಂಟಿ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಗೆ ಅವಕಾಶ ಮಾಡಿಕೊಡಲಿದೆ ಎಂದು ಜಪಾನ್ನ ವಿದೇಶಾಂಗ ಇಲಾಖೆ ಗುರುವಾರ ವರದಿ ಮಾಡಿದೆ.

ಜಗತ್ತಿನಲ್ಲಿ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಯುಇಎ 11ನೇ ಸ್ಥಾನದಲ್ಲಿದೆ. ಬ್ರಿಟನ್ ಮತ್ತು ಇಟಲಿ ಸಹಯೋಗದಲ್ಲಿ ಮುಂದಿನ ತಲೆಮಾರಿನ, ಅತ್ಯಾಧುನಿಕ ಯುದ್ಧವಿಮಾನ ಅಭಿವೃದ್ಧಿಗೊಳಿಸುತ್ತಿರುವ ಜಪಾನ್ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯ ವಲಯದ ದೇಶದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ.

ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಇಎಗೆ ಜಪಾನ್ನ ರಾಯಭಾರಿ ಇಸೊಮಟ ಅಕಿಯೊ, ಯುಎಇಯ ರಕ್ಷಣಾ ಇಲಾಖೆಯ ಬೆಂಬಲ ಮತ್ತು ರಕ್ಷಣಾ ಉದ್ಯಮ ವಿಭಾಗದ ಅಧಿಕಾರಿ ಡಾ. ಮುಬಾರಕ್ ಸಯೀದ್ ಘಫಾನ್ ಅಲ್ ಜಾಬ್ರಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 

ರಕ್ಷಣಾ ಸಾಧನಗಳು ಮತ್ತು ತಂತ್ರಜ್ಞಾನದ ವರ್ಗಾವಣೆಯ ಮೇಲೆ ಸೂಕ್ತ ನಿಯಂತ್ರಣವನ್ನು ಈ ಒಪ್ಪಂದ ಖಾತರಿಗೊಳಿಸಲಿದೆ(ವಿಶೇಷವಾಗಿ ಮೂರನೇ ವ್ಯಕ್ತಿಗೆ ಯಾವುದೇ ನಂತರದ ವರ್ಗಾವಣೆ ಅಥವಾ ಹೆಚ್ಚುವರಿ ಉದ್ದೇಶದ ಬಳಕೆಗೆ ಸಂಬಂಧಿಸಿದಂತೆ).  ಉಭಯ ದೇಶಗಳ ಸರಕಾರಗಳ ನಡುವಿನ ಅಗತ್ಯ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ ಒಪ್ಪಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ಹೇಳಿದೆ.

Similar News