ದೇಶದ ಪುತ್ರಿಯರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ: ವಿನೇಶ್ ಫೋಗಟ್ ಆರೋಪ

Update: 2023-05-28 08:20 GMT

ಹೊಸದಿಲ್ಲಿ: ಇಂದು ನೂತನ ಸಂಸತ್ ಭವನದ ಮುಂದೆ ನಡೆಸಲು ಉದ್ದೇಶಿಸಲಾಗಿದ್ದ 'ಮಹಿಳಾ ಸಮ್ಮಾನ್ ಮಹಾ ಪಂಚಾಯತ್'ಗೂ ಮುನ್ನ ಪ್ರತಿಭಟನಾನಿರತ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಆರೋಪಿಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ವಿನೇಶ್ ಫೋಗಟ್, "ಪ್ರಜಾಪ್ರಭುತ್ವವನ್ನು ಬಹಿರಂಗವಾಗಿಯೇ ಹತ್ಯೆ ಮಾಡಲಾಗುತ್ತಿದೆ" ಎಂದು ದೂರಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆಯಾಗುತ್ತಿರುವ ಸಂದರ್ಭದಲ್ಲಿ ಹೇಗೆ ತಮ್ಮ ಹಕ್ಕಿಗಾಗಿ ಒತ್ತಾಯಿಸುತ್ತಿರುವ ಮಹಿಳೆಯರನ್ನು ಹತ್ತಿಕ್ಕಲಾಯಿತು ಎಂಬುದನ್ನು ದೇಶ ನೆನಪಿಟ್ಟುಕೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.

ನೂತನ ಸಂಸತ್ ಭವನಕ್ಕೆ ಕುಸ್ತಿ ಪಟುಗಳು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೂ ಮುನ್ನ ದಿಲ್ಲಿಯ ಗಡಿ ಪ್ರದೇಶಗಳಾದ ಸಿಂಘು, ಟಿಕ್ರಿ ಹಾಗೂ ಘಾಝಿಪುರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರತಿಭಟನಾಕಾರರು ಖಾಪ್ ಪಂಚಾಯತ್‌ನಲ್ಲಿ ಪಾಲ್ಗೊಳ್ಳದಂತೆ ತಡೆಯಬೇಕು ಎಂದು ತಮಗೆ ಸೂಚಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ."ನಾವು ಈವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ. ನೂತನ ಸಂಸತ್ ಭವನದ ಉದ್ಘಾಟನೆ ಇರುವುದರಿಂದ ದಿಲ್ಲಿ ತೊರೆಯುವಂತೆ ರೈತರಿಗೆ ಕೇಳಿಕೊಳ್ಳುತ್ತೇವೆ" ಎಂದು ಓರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ, ಭಾರತ್ ಕಿಸಾನ್ ಯೂನಿಯನ್ ಮುಖ್ಯಸ್ಥ ಗುರುನಾಮ್ ಸಿಂಗ್ ಸೇರಿದಂತೆ ಹಲವು ರೈತರನ್ನು ಅವರ ನಿವಾಸಗಳಿಂದ ಹರ್ಯಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಅವರು ಪ್ರತಿಭಟನಾನಿರತ ಕುಸ್ತಿ ಪಟುಗಳ ಪರವಾಗಿ ದಿಲ್ಲಿಗೆ ಮೆರವಣಿಗೆ ನಡೆಸುವವರಿದ್ದರು. ಮತ್ತೊಂದು ಸುದ್ದಿಯ ಪ್ರಕಾರ, ದಿಲ್ಲಿ ಪೊಲೀಸರು ನೂತನ ಸಂಸತ್ ಭವನ ಉದ್ಘಾಟನೆಗೂ ಮುನ್ನ ಉದ್ಭವಿಸಬಹುದಾದ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಯಂತ್ರಿಸಲು ಹೊರ ದಿಲ್ಲಿಯ ಬವಾನಾದ ಎಂಸಿಡಿ ಶಾಲೆಯಲ್ಲಿ ತಾತ್ಕಾಲಿಕ ಕಾರಾಗೃಹ ನಿರ್ಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

Similar News