ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ 75 ರೂ. ನಾಣ್ಯದ ವೈಶಿಷ್ಟ್ಯಗಳೇನು, ಅದನ್ನು ಹೇಗೆ ಪಡೆಯಬಹುದು?

Update: 2023-05-29 15:28 GMT

ಹೊಸದಿಲ್ಲಿ: ರವಿವಾರ ನೂತನ ಸಂಸತ್ ಕಟ್ಟಡದ ಉದ್ಘಾಟನೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು 75 ರೂ.ಗಳ ನಾಣ್ಯವನ್ನು ಬಿಡುಗಡೆಗೊಳಿಸಿದ್ದಾರೆ.

ಭಾರತವು 1960ರಿಂದ ಗಣ್ಯ ವ್ಯಕ್ತಿಗಳ ಗೌರವಾರ್ಥ, ಸರಕಾರಿ ಯೋಜನೆಗಳ ಕುರಿತು ಜಾಗ್ರತಿ ಮೂಡಿಸಲು ಅಥವಾ ಪ್ರಮುಖ ಐತಿಹಾಸಿಕ ಘಟನೆಗಳ ನೆನಪಿಗಾಗಿ; ಹೀಗೆ ಹಲವಾರು ಕಾರಣಗಳಿಂದ ಸ್ಮರಣಾರ್ಥ ನಾಣ್ಯಗಳನ್ನು ವಿತರಿಸುತ್ತಿದೆ.

ಹೊಸ 75 ರೂ.ನಾಣ್ಯದ ವೈಶಿಷ್ಟ್ಯಗಳೇನು?

ವಿತ್ತ ಸಚಿವಾಲಯದ ಅಧಿಸೂಚನೆಯಂತೆ 75 ರೂ.ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿದೆ. ನಾಣ್ಯವನ್ನು ಮಿಶ್ರಲೋಹದಿಂದ ಮಾಡಲಾಗಿದ್ದು,ಶೇ. 50ರಷ್ಟು ಬೆಳ್ಳಿ,ಶೇ.40ರಷ್ಟು ತಾಮ್ರ,ಶೇ.5ರಷ್ಟು ನಿಕೆಲ್ ಮತ್ತು ಶೇ.5ರಷ್ಟು ಸತುವನ್ನು ಒಳಗೊಂಡಿದೆ.

ನಾಣ್ಯದ ಎದುರು ಬದಿಯಲ್ಲಿ ಮಧ್ಯದಲ್ಲಿ ಅಶೋಕ ಸ್ತಂಭದ ಸಿಂಹವಿದ್ದು, ಅದರ ಕೆಳಗೆ ‘ಸತ್ಯಮೇವ ಜಯತೇ’ಎಂದು ದೇವನಾಗರಿ ಲಿಪಿಯಲ್ಲಿ ಕೆತ್ತಲಾಗಿದೆ. ಎಡಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ‘ಭಾರತ’ ಮತ್ತು ಬಲಪರಿಧಿಯಲ್ಲಿ ಇಂಗ್ಲೀಷ್ ನಲ್ಲಿ ‘ಇಂಡಿಯಾ’ ಎಂದು ಬರೆಯಲಾಗಿದೆ. ನಾಣ್ಯದ ಹಿಂಬದಿಯು ನೂತನ ಸಂಸತ್ ಕಟ್ಟಡದ ಚಿತ್ರವನ್ನು ಹೊಂದಿದ್ದು, ಮೇಲ್ಬದಿಯಲ್ಲಿ ದೇವನಾಗರಿ ಲಿಪಿಯಲ್ಲಿ ‘ಸಂಸದ್ ಸಂಕುಲ’ ಮತ್ತು ಕೆಳಭಾಗದಲ್ಲಿ ಇಂಗ್ಲೀಷ್ ನಲ್ಲಿ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್’ ಎಂದು ಬರೆಯಲಾಗಿದೆ.

ಈ ನಾಣ್ಯವನ್ನು ಪಡೆಯುವುದು ಹೇಗೆ, ಅದನ್ನು ವೆಚ್ಚ ಮಾಡಬಹುದೇ?

ನಾಣ್ಯವನ್ನು ಯಾರು ಬೇಕಾದರೂ ಖರಿದಿಸಬಹುದು ಮತ್ತು ಅದು ಸೆಕ್ಯೂರಿಟೀಸ್ ಆಫ್ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ವೆಬ್ಸೈಟ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಇಂತಹ ಸ್ಮರಣಾರ್ಥ ನಾಣ್ಯಗಳನ್ನು ಅಮೂಲ್ಯವಾದ ಲೋಹಗಳಿಂದ ಮಾಡಲಾಗಿರುವುದರಿಂದ ಅವುಗಳನ್ನು ಮುಖಬೆಲೆಗಿಂತ ಹೆಚ್ಚಿನ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ನೂತನ 75 ರೂ.ನಾಣ್ಯದ ಮಾರಾಟ ಬೆಲೆಯನ್ನು ಸರಕಾರವು ಇನ್ನೂ ಪ್ರಕಟಿಸಿಲ್ಲ. ನೂತನ 75 ರೂ. ನಾಣ್ಯವನ್ನು ಖರೀದಿಗೆ ಬಳಸುವಂತಿಲ್ಲ. ಅದು ಸಾಮಾನ್ಯ ಚಲಾವಣೆ ಅಥವಾ ದೈನಂದಿನ ವಹಿವಾಟುಗಳಿಗಾಗಿ ಅಲ್ಲ. ಅದು ಸಂಗ್ರಹಕಾರರ ವಸ್ತುವಾಗಿದೆ.

ಕೃಪೆ: indianexpress.com

Similar News