ಬಿಡಾಡಿ ಹೋರಿಗಳ ದಾಳಿ: ಸೈನಿಕ ಸೇರಿ ಇಬ್ಬರು ಮೃತ್ಯು

Update: 2023-05-30 04:02 GMT

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಡಾಡಿ ಹೋರಿಗಳ ದಾಳಿಯಿಂದ ಇಬ್ಬರು ಸೈನಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡ ಪ್ರತ್ಯೇಕ ಘಟನೆಗಳು ಅಮ್ರೋಹಾ ಮತ್ತು ಫಿಲಿಬಿಟ್‌ನಲ್ಲಿ ನಡೆದಿವೆ.

ಅಮ್ರೋಹಾ ಜಿಲ್ಲೆಯ ಭವನ್‌ಖೇಡಿ ಗ್ರಾಮದ ಹಸನ್‌ಪುರ ಅತ್ರಾಸ್ತಿ ರಸ್ತೆಯಲ್ಲಿ ಸೋಮವಾರ ನಡೆದ ಘಟನೆಯಲ್ಲಿ 28 ವರ್ಷದ ಭಾರತೀಯ ಸೇನೆಯ ಜವಾನ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಅಂಕಿತ್ ಕುಮಾರ್ ಎಂಬ ಸೈನಿಕ ಪಂಜಾಬ್‌ನ ಫಿರೋಜಾಪುರದ 507 ಎಎಸ್‌ಸಿ ಬೆಟಾಲಿಯನ್‌ಗೆ ಸೇರಿದವರು. ಎತ್ತು ಸೈನಿಕನ ಹೊಟ್ಟೆಗೆ ತಿವಿದದ್ದರಿಂದ ಕುಮಾರ್ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಅವರ ಪತ್ನಿ ಸೋನಮ್ (25) ಮತ್ತು ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾವು ಆ ಹೋರಿಯನ್ನು ಸೆರೆಹಿಡಿದು ಗೋಶಾಲೆಗೆ ಕಳುಹಿಸುವುದಾಗಿ ಹನಸ್‌ಪುರ ಠಾಣಾಧಿಕಾರಿ ಸುಶೀಲ್ ವರ್ಮಾ ತಿಳಿಸಿದ್ದಾರೆ.

ಕುಮಾರ್ ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಈ ಘಟನೆ ನನ್ನ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಸನ್‌ಪುರ ಎಸ್‌ಡಿಎಂ ಅವರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಬಿ.ಕೆ.ತ್ರಿಪಾಠಿ ಹೇಳಿದ್ದಾರೆ.

ಫಿಲಿಬಿಟ್‌ನಲ್ಲಿ ನಡೆದ ಘಟನೆಯಲ್ಲಿ ನಗರದ ಹೊರವಲಯದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಂಟಿ ಲೋಧಿ ಎಂಬ ವ್ಯಕ್ತಿ ಬಲಿಯಾಗಿದ್ದಾರೆ. ರಾತ್ರಿ 10 ಸುಮಾರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎತ್ತು ಡಿಕ್ಕಿ ಹೊಡೆದು ಬಂಟಿ ಲೋಧಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ರಸ್ತೆಯಲ್ಲಿದ್ದ ಅವರ ಮೇಳೆ ಎತ್ತು ದಾಳಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು   ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದರು. ಈ ಬಗ್ಗೆ ಕುಟುಂದಬವರಿಗೆ ಮಾಹಿತಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾಗಿ ಸನ್‌ಗ್ರಾಹಿ ಠಾಣೆ ಎಸ್‌ಎಚ್ ‌ಓ ಜಗತ್ ಸಿಂಗ್ ತಿಳಿಸಿದ್ದಾರೆ.

Similar News