ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್ ಒಗ್ಗಟ್ಟಿನಿಂದ ಕೆಲಸ ಮಾಡಲು ಒಮ್ಮತದಿಂದ ನಿರ್ಧರಿಸಿದ್ದಾರೆ: ಕಾಂಗ್ರೆಸ್

Update: 2023-05-30 06:30 GMT

ಹೊಸದಿಲ್ಲಿ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ  ಮಾಜಿ ಉಪಮುಖ್ಯಮಂತ್ರಿ, ಗೆಹ್ಲೋಟ್  ರಾಜಕೀಯ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರನ್ನು ಸೋಮವಾರ  ದಿಲ್ಲಿಗೆ ಕರೆಸಿಕೊಂಡಿರುವ ರಾಹುಲ್ ಗಾಂಧಿ ಹಾಗೂ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಇಬ್ಬರೊಂದಿಗೆ ಚರ್ಚಿಸಿದರು. ಮುಂಬರುವ ರಾಜಸ್ಥಾನ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುತ್ತಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

 ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ತನ್ನ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳುವ ಹತಾಶೆಯಲ್ಲಿದೆ.

"ಇಬ್ಬರೂ  ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಲು ಒಮ್ಮತದಿಂದ ನಿರ್ಧರಿಸಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ'' ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ನಾಲ್ಕು ಗಂಟೆಗಳ ಸಭೆಯ ನಂತರ ಹೇಳಿದರು.

 ಮುಂಬರುವ ಚುನಾವಣೆಗಳಿಗೆ 'ಶಾಂತಿ ಒಪ್ಪಂದ' ಅಥವಾ ಜವಾಬ್ದಾರಿಗಳ ಹಂಚಿಕೆಯ ವಿವರಗಳನ್ನು ನೀಡಲಾಗಿಲ್ಲ.

ಕಳೆದ ಕೆಲವು ವರ್ಷಗಳಿಂದ  ಅಶೋಕ್ ಗೆಹ್ಲೋಟ್  ಹಾಗೂ ಸಚಿನ್ ಪೈಲಟ್  ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ.

ಸೋಮವಾರದ ಸಭೆಯು ರಾಜ್ಯದ ಇಬ್ಬರು ಪ್ರಮುಖ ನಾಯಕರ ನಡುವಿನ ಭಿನ್ನಮತಕ್ಕೆ ಪರಿಹಾರ  ಕಂಡುಕೊಳ್ಳುವ ಪ್ರಯತ್ನವಾಗಿದೆ ಎಂದು ಮೂಲಗಳು ಸೂಚಿಸಿವೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ನಡುವಿನ ಶಾಂತಿ ಮಾತುಕತೆಯಿಂದ ಇದು ಪ್ರೇರಿತವಾಗಿದೆ ಎನ್ನಲಾಗಿದೆ.

Similar News