ಪ್ರಧಾನಿ ಮೋದಿ ತನಗೆ ದೇವರಿಗಿಂತ ಹೆಚ್ಚು ತಿಳಿದಿದೆ ಎಂದು ಭಾವಿಸುತ್ತಾರೆ: ರಾಹುಲ್ ಗಾಂಧಿ

Update: 2023-05-31 13:10 GMT

ಹೊಸದಿಲ್ಲಿ: “ತಮಗೆ ಎಲ್ಲವೂ ತಿಳಿದಿದೆ ಎಂದು ಖಂಡಿತವಾಗಿ ಅಂದುಕೊಂಡಿರುವ ಜನರ ಒಂದು ಗುಂಪು ಇಂದು ಭಾರತವನ್ನು ನಡೆಸುತ್ತಿದೆ, ಅವರು ದೇವರ ಜೊತೆಗೆ ಕುಳಿತುಕೊಂಡು ವಿಷಯಗಳನ್ನು ವಿವರಿಸಬಹುದು ಮತ್ತು ಅಂತಹ ಒಬ್ಬ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿ ವಿವಾದಕ್ಕೀಡಾಗಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಭಾರತೀಯರೊಂದಿಗಿನ ಸಂವಹನ ಕಾರ್ಯಕ್ರಮದಲ್ಲಿ ಅವರು ಇಂದು ಮಾತನಾಡುವ ವೇಳೆ ಮೇಲಿನಂತೆ ಹೇಳಿದರು.

“ನನಗನಿಸುತ್ತದೆ ಮೋದೀ ಜಿ ಅವರನ್ನು ದೇವರ ಪಕ್ಕ ಕೂರಿಸಿದರೆ, ಜಗತ್ತು ಹೇಗೆ ಕೆಲಸ ಮಾಡುತ್ತದೆ ಎಂದು ದೇವರಿಗೆ ಅವರು ವಿವರಿಸಲು ಆರಂಭಿಸಬಹುದು. ಮತ್ತೆ ತಾನೇನನ್ನು ಸೃಷ್ಟಿಸಿದ್ದೆ ಎಂದು ದೇವರಿಗೆ ಕೂಡ ಗೊಂದಲವುಂಟಾಗಬಹುದು,” ಎಂದು ರಾಹುಲ್‌ ಹೇಳಿದರು.

“ಎಲ್ಲವನ್ನೂ ತಿಳಿದಿರುವ ಜನರ ಗುಂಪೊಂದಿದೆ. ಅವರು ವಿಜ್ಞಾನಿಗಳಿಗೆ ವಿಜ್ಞಾನವನ್ನು, ಇತಿಹಾಸಕಾರರಿಗೆ ಇತಿಹಾಸವನ್ನು, ಸೇನೆಗೆ ಯುದ್ಧ ಕೌಶಲ್ಯವನ್ನು ವಿವರಿಸಬಲ್ಲರು, ಆದರೆ ಅವರಿಗೆ ವಾಸ್ತವವಾಗಿ ಏನೂ ಅರ್ಥವಾಗದು,” ಎಂದು ರಾಹುಲ್‌ ಹೇಳಿದರು.

ತಮ್ಮ ಭಾರತ್‌ ಜೋಡೋ ಯಾತ್ರಾ ಕುರಿತು ಮಾತನಾಡಿದ ರಾಹುಲ್, ಸರ್ಕಾರ ಅದನ್ನು ನಿಲ್ಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದ್ದರೂ ಅದರ ಪ್ರಭಾವ ಹೆಚ್ಚುತ್ತಲೇ ಹೋಯಿತು ಎಂದರು.

ನೂತನ ಸಂಸತ್ತಿನಲ್ಲಿ ಪ್ರಧಾನಿ ಸ್ಥಾಪಿಸಿದ ಸೆಂಗೊಲ್‌ ಕುರಿತು ಮಾತನಾಡಿದ ರಾಹುಲ್‌ “ಪ್ರಧಾನಿ ಮೋದಿ ಮತ್ತವರ ಸರ್ಕಾರಕ್ಕೆ ನಿರುದ್ಯೋಗ, ಬೆಲೆಯೇರಿಕೆ, ದ್ವೇಷ ಮತ್ತು ಆಕ್ರೋಶದ ವಾತಾವರಣವನ್ನು ಪರಿಹರಿಸಲು ಅಸಾಧ್ಯವಾಗಿದೆ. ಈ ವಿಚಾರಗಳನ್ನು ಅವರಿಗೆ ಚರ್ಚಿಸಲು ಸಾಧ್ಯವಿಲ್ಲ ಅದಕ್ಕೆ ಅವರು ಇದನ್ನು ಮಾಡಬೇಕಾಯಿತು,” ಎಂದರು.

Similar News