ಪ್ರಭುತ್ವ ಯಾವುದೇ ಒಂದು ಧರ್ಮಕ್ಕೆ ನಿಷ್ಠವಾಗಬಾರದು, ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು: ಜಸ್ಟಿಸ್‌ ನಾಗರತ್ನ

Update: 2023-05-31 14:27 GMT

ಹೊಸದಿಲ್ಲಿ: ಪ್ರಭುತ್ವ ಯಾವುದೇ ಒಂದು ಧರ್ಮಕ್ಕೆ ನಿಷ್ಠವಾಗಿರಬಾರದು ಹಾಗೂ ಸಂವಿಧಾನದ ಪ್ರಕಾರ, ಧಾರ್ಮಿಕ ಬಹುಸಂಖ್ಯಾತರು ಯಾವುದೇ ಬಗೆಯ ಆದ್ಯತೆಯ ಉಪಚಾರವನ್ನು ಅನುಭವಿಸಬಾರದು ಎಂದು ಮಂಗಳವಾರ ಸುಪ್ರೀಂಕೋರ್ಟ್‌ನ ನ್ಯಾ. ಬಿ.ವಿ.ನಾಗರತ್ನ ಒತ್ತಿ ಹೇಳಿದ್ದಾರೆ ಎಂದು livelaw.in ವರದಿ ಮಾಡಿದೆ.

DAKSH ಆಯೋಜಿಸಿದ್ದ 'ಸಾಂವಿಧಾನಿಕ ಆದರ್ಶಗಳು' ಎಂಬ ಕೃತಿಯನ್ನು ಬಿಡುಗಡೆ ಮಾಡಿ ನ್ಯಾ. ಬಿ.ವಿ.ನಾಗರತ್ನ ಮಾತನಾಡುತ್ತಿದ್ದರು.

"ಭಾರತೀಯ ಸಂವಿಧಾನದ ಪ್ರಕಾರ, ಜಾತ್ಯತೀತತೆ ಎಂದರೆ ಪ್ರಭುತ್ವ ಯಾವುದೇ ಒಂದು ಧರ್ಮಕ್ಕೆ ನಿಷ್ಠೆ ಪ್ರದರ್ಶಿಸಬಾರದು. ಪ್ರಭುತ್ವವು ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸಬೇಕು. ನ್ಯಾಯ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಆಯಾಮಗಳನ್ನು ಆಧರಿಸಿ ಹೊಸ ಬಗೆಯ ಸಾಮಾಜಿಕ ನೀತಿಯನ್ನು ಜಾರಿಗೆ ತರಲು ದೇಶವು ಎಲ್ಲ ಬಗೆಯ ಧಾರ್ಮಿಕ ವೈವಿಧ್ಯತೆ, ಜಾತಿ ಹಾಗೂ ಜನಾಂಗಗಳನ್ನು ಮೀರಿರಬೇಕು ಎಂಬುದು ಸಂವಿಧಾನ ರಚನಾಕಾರರ ದೂರದೃಷ್ಟಿಯಾಗಿತ್ತು. ಪ್ರಭುತ್ವದ ಕೈಯಲ್ಲಿ ಬಹುಸಂಖ್ಯಾತ ಧರ್ಮೀಯರು ಯಾವುದೇ ಬಗೆಯ ಆದ್ಯತೆಯ ಉಪಚಾರವನ್ನು ಅನುಭವಿಸಬಾರದು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂಬ ನಿಟ್ಟಿನಲ್ಲಿ ಜಾತ್ಯತೀತ ನೀತಿಯನ್ನು ವೃದ್ಧಿಸಬೇಕು ಎಂಬುದು ಸಂವಿಧಾನದ ಆಶಯವಾಗಿತ್ತು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Similar News