ಮಳೆಯಿಂದ ರಕ್ಷಣೆಗಾಗಿ ಅಂಗಡಿ ಮುಂದೆ ನಿಂತಿದ್ದ ವಿದ್ಯಾರ್ಥಿನಿಯ ಅತ್ಯಾಚಾರ

Update: 2023-06-01 10:38 GMT

ಫರೀದಾಬಾದ್: ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಮುಂದೆ ನಿಂತಿದ್ದ 16 ವರ್ಷ ವಯಸ್ಸಿನ ಯುವತಿಯನ್ನು ಎಳೆದೊಯ್ದು ಚಾಕು ತೋರಿಸಿ ಬೆದರಿಸಿ, ಅತ್ಯಾಚಾರ ನಡೆಸಿದ ಎಂಬ ಆರೋಪದಲ್ಲಿ 23 ವರ್ಷ ವಯಸ್ಸಿನ ಕ್ಷೌರಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಸೆಕ್ಟರ್ 63ರಲ್ಲಿ ಸೋಮವಾರ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಯುವಕ ಗುರುಗ್ರಾಮದ ಘಂಗೋಲಾ ಗ್ರಾಮದವನು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ನನ್ನ ಮಗಳು ಮೇ 29ರಂದು ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ವಿವರಿಸಿದ್ದಾಗಿ ಫರೀದಾಬಾದ್ ಪೊಲೀಸ್ ವಕ್ತಾರ ಸುಬೇ ಸಿಂಗ್ ಹೇಳಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ಸೆಲೂನ್‌ನ ಪಕ್ಕದ ಶೆಡ್‌ಗೆ ಯುವತಿ ತೆರಳಿದ್ದಳು ಎನ್ನಲಾಗಿದೆ.

ಆರೋಪಿ, ಈ ಯುವತಿಯನ್ನು ತನ್ನ ಅಂಗಡಿಯೊಳಕ್ಕೆ ಎಳೆದೊಯ್ದು ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಈ ಘಟನೆಯನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾನೆ.

ಸಂಜೆಯವರೆಗೂ ಮಗಳು ಮನೆಗೆ ಬಾರದಿದ್ದಾಗ ತಾಯಿ ಆತಂಕಿತರಾದರು. ಬಳಿಕ ಆಕೆ ರಸ್ತೆ ಬದಿಯಲ್ಲಿ ಅಳುತ್ತಾ ನಿಂತಿರುವುದು ಕಂಡುಬಂತು. ಮನೆಗೆ ಮರಳಲು ಭಯವಾಗುತ್ತಿದೆ ಎಂದು ಯುವತಿ ಹೇಳಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 6ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

Similar News