ಜಾತಿ ತಿಳಿದ ಬಳಿಕ ಸಹಪಾಠಿಗಳ ನಡವಳಿಕೆ ಬದಲಾವಣೆ: ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖ

Update: 2023-06-01 08:35 GMT

ಮುಂಬೈ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಬಾಂಬೆ ಇಲ್ಲಿನ ಕ್ಯಾಂಪಸ್ಸಿನಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸ್ಥೆಯ ವಿದ್ಯಾರ್ಥಿ ದರ್ಶನ್‌ ಸೋಳಂಕಿ ತನ್ನ ತಾಯಿಗೆ ಮೊದಲೇ ತಿಳಿಸಿದ್ದನೆಂಬ ವಿಚಾರ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಗೊಂಡಿದೆ.

ತನ್ನ ಜಾತಿಯ ಬಗ್ಗೆ ತಿಳಿಯುತ್ತಲೇ ಸಹಪಾಠಿಗಳ ನಡವಳಿಕೆ ಬದಲಾಗಿತ್ತು ಎಂದು ತಾಯಿಯ ಜೊತೆಗಿನ ದೂರವಾಣಿ ಸಂಭಾಷಣೆಗಳಲ್ಲಿ ಆತ ಹೇಳಿದ್ದ ಎಂದೂ ಅದರಲ್ಲಿ ಉಲ್ಲೇಖವಾಗಿದೆ.

ಮಂಗಳವಾರ ಪೊಲೀಸರು ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿಯ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸೋಳಂಕಿಯ ತಾಯಿಯ ಹೇಳಿಕೆಯನ್ನೂ ಸೇರಿಸಲಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಬಂಧಿಸಲ್ಪಟ್ಟು ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಸೋಳಂಕಿಯ ಸಹಪಾಠಿ ಅರ್ಮಾನ್‌ ಖತ್ರಿ ಹೆಸರು ಕೂಡ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಹ್ಮದಾಬಾದ್‌ ಮೂಲದ ಸೋಳಂಕಿ ಐಐಟಿ ಬಾಂಬೆಯಲ್ಲಿ ಪ್ರಥಮ ವರ್ಷದ ಬಿಟೆಕ್‌ ವಿದ್ಯಾರ್ಥಿಯಾಗಿದ್ದ. ಫೆಬ್ರವರಿ 12, 2023 ರಲ್ಲಿ ಆತ ಮುಂಬೈಯ ಪೊವೈ ಪ್ರದೇಶದ ಐಐಟಿಬಿ ಕ್ಯಾಂಪಸ್ಸಿನಲ್ಲಿರುವ ಹಾಸ್ಟೆಲ್‌ ಕಟ್ಟಡದ ಏಳನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಹೇಳಲಾಗಿತ್ತು. ಸೆಮಿಸ್ಟರ್‌ ಪರೀಕ್ಷೆ ಅಂತ್ಯಗೊಂಡ ಮರುದಿನವೇ ಈ ಘಟನೆ ನಡೆದಿತ್ತು.

ಸೋಳಂಕಿ ಧರ್ಮದ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ನಂತರ ಆತನನ್ನು ಕೊಲ್ಲುವ ಬೆದರಿಕೆಯನ್ನು ಖತ್ರಿ ಒಡ್ಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಐಐಟಿಯಲ್ಲಿ ಜಾತಿ ಆಧರಿತ ತಾರತಮ್ಯವಿದೆ ಎಂದು ಸೋಳಂಕಿ ತನ್ನ ಸಹೋದರಿ ಜೊತೆ ದೂರವಾಣಿ ಸಂಭಾಷಣೆಯಲ್ಲಿ ಡಿಸೆಂಬರ್‌ 2022 ರಲ್ಲಿ ಹೇಳಿದ್ದನೆಂದು ಸೋಳಂಕಿ ತಾಯಿಯ ಹೇಳಿಕೆ ತಿಳಿಸಿದೆ.

ಫೆಬ್ರವರಿ 12ರಂದು ಸೋಳಂಕಿ ತಾಯಿಗೆ ಕರೆ ಮಾಡಿ ತಾನು ಫೆಬ್ರವರಿ 14ರಂದು ವಾಪಸ್‌ ಬರುವುದಾಗಿ ಹಾಗೂ ಸೌಹಾರ್ದಕೂಟಕ್ಕೆ ಎಲ್ಲರನ್ನೂ ಆಹ್ವಾನಿಸಬೇಕೆಂದು ತಿಳಿಸಿದ್ದ.

ಇದಾದ ಎರಡೇ ಗಂಟೆಗಳಲ್ಲಿ ಆತನ ತಂದೆಗೆ ಕರೆಯೊಂದು ಬಂದು ಆತ ಮಹಡಿಯಿಂದ ಬಿದ್ದಿರುವ ಮಾಹಿತಿ ದೊರಕಿತ್ತು.

Similar News