ಮೇಕೆದಾಟು ಬಗ್ಗೆ ಆಕ್ರಮಣಕಾರಿ ನಿಲುವು ಬೇಡ: ಡಿಕೆಶಿಗೆ ತಮಿಳುನಾಡು ಸಚಿವರ ಸಲಹೆ

Update: 2023-06-01 11:03 GMT

ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ  ಮೇಕೆದಾಟುವಿನಲ್ಲಿ ಕರ್ನಾಟಕ ಅಣೆಕಟ್ಟು ನಿರ್ಮಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆಗೆ ತಮಿಳುನಾಡಿನ ಆಡಳಿತ ಡಿಎಂಕೆ ಆಕ್ಷೇಪಿಸಿದೆಯಲ್ಲದೆ ಈ ಯೋಜನೆಗೆ ತನ್ನ ವಿರೋಧವನ್ನು ಪುನರುಚ್ಛರಿಸಿದೆ.

ಆಡಳಿತ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಉಪಮುಖ್ಯಮಂತ್ರಿ ಏಕೆ ಇಷ್ಟು ಆಕ್ರಮಣಕಾರಿ ಧೋರಣೆ ಹೊಂದಿದ್ದಾರೆ ಎಂದೂ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್‌ ಪ್ರಶ್ನಿಸಿದ್ದಾರೆ.

ಆಡಳಿತ ಡಿಎಂಕೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರು ಡಿಕೆ ಶಿವಕುಮಾರ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ರೂ. 1000 ಕೋಟಿ ಮೀಸಲಿಸಲಾಗಿರುವ ಮೇಕೆದಾಟು ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಿವಕುಮಾರ್‌ ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿರುವ ಬೆನ್ನಿಗೆ ತಮಿಳುನಾಡು ಸಚಿವರ ಪ್ರತಿಕ್ರಿಯೆ ಬಂದಿದೆ.

ಕರ್ನಾಟಕದ ಯೋಜನೆಗೆ ತಮಿಳುನಾಡು ವಿರೋಧಿಸುತ್ತದೆ ಎಂದು ಹೇಳಿದ ಮುರುಗನ್‌ ತಾವು ಖುದ್ದಾಗಿ ಭೇಟಿಯಾಗಿ ವಿವರಿಸುವ ತನಕ ಶಿವಕುಮಾರ್‌ ತಾಳ್ಮೆಯಿಂದ ಕಾಯುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದರು.

“ಕಾವೇರಿ ನೀರು ವಿವಾದ ಟ್ರಿಬ್ಯುನಲ್‌ ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳಲ್ಲೂ ಮೇಕೆದಾಟು ವಿಚಾರ ಉಲ್ಲೇಖಗೊಂಡಿಲ್ಲ. ಯಾವುದೇ ಅನುಮತಿಸದ ನಿರ್ಮಾಣ ತಮಿಳುನಾಡನ್ನು ಬಾಧಿಸಲಿದೆ. ಆದ್ದರಿಂದ ಯಾರ ಅಧೀನದಲ್ಲೂ ಇರದ ಹಾಗೂ ತಮಿಳುನಾಡಿಗೂ ಹಕ್ಕುಗಳಿರುವ  ಜಲಾನಯನ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲಾಗುವುದು ಎಂಬ ಹೇಳಿಕೆ ಸ್ವಾಗತಾರ್ಹವಲ್ಲ,” ಎಂದು ಅವರು ಹೇಳಿದರು.

Similar News