ಮಣಿಪುರ ಪೊಲೀಸ್ ಮಹಾ ನಿರ್ದೇಶಕ ಬದಲಾವಣೆ: ತ್ರಿಪುರ ಕ್ಯಾಡರ್ ನ ಐಪಿಎಸ್ ಅಧಿಕಾರಿಗೆ 3 ವರ್ಷಗಳ ಕಾಲ ಅಧಿಕಾರ

Update: 2023-06-01 15:30 GMT

ಇಂಫಾಲ: ಜನಾಂಗೀಯ ಹಿಂಸೆಯಿಂದ ತತ್ತರಿಸುತ್ತಿರುವ ಮಣಿಪುರದ ಪೊಲೀಸ್ ಮುಖ್ಯಸ್ಥರನ್ನು ಗುರುವಾರ ಬದಲಾಯಿಸಲಾಗಿದೆ. 1987ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಮಣಿಪುರದವರೇ ಆಗಿರುವ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಿ. ಡೌಂಗೆಲ್ ರ ಸ್ಥಾನದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ರಾಜೀವ್ ಸಿಂಗ್ ರನ್ನು ‘‘ಸಾರ್ವಜನಿಕ ಹಿತಾಸಕ್ತಿಯಿಂದ ವಿಶೇಷ ಪ್ರಕರಣ ಎಂಬುದಾಗಿ ಪರಿಗಣಿಸಿ’’ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿದೆ ಎಂದು ಅಧಿಕೃತ ಆದೇಶವೊಂದು ತಿಳಿಸಿದೆ.

1993ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ನೂತನ ಡಿಜಿಪಿ ಪಕ್ಕದ ತ್ರಿಪುರಾ ರಾಜ್ಯಕ್ಕೆ ಸೇರಿದವರು. ಅವರು ದಿಲ್ಲಿಯ CRPFಪ್ರಧಾನಕಚೇರಿಯಲ್ಲಿ ಕಾರ್ಯಾಚರಣೆಗಳ ಮಹಾನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿರ್ಗಮನ ಡಿಜಿಪಿ ಡೌಂಗೆಲ್ ಗೆ ‘ವಿಶೇಷ ಕರ್ತವ್ಯ ಅಧಿಕಾರಿ (ಗೃಹ)’ ಎಂಬ ಹುದ್ದೆಯನ್ನು ಸೃಷ್ಟಿಸಲಾಗಿದೆ. ಅವರು ಈ ತಿಂಗಳ ಕೊನೆಯ ವೇಳೆಗೆ ನಿವೃತ್ತರಾಗಲಿದ್ದಾರೆ.

‘‘ಸಾರ್ವಜನಿಕ ಹಿತಾಸಕ್ತಿಯಿಂದ ವಿಶೇಷ ಪ್ರಕರಣ ಎಂಬುದಾಗಿ ಪರಿಗಣಿಸಿ’’ ಸಿಂಗ್ ರನ್ನು ತ್ರಿಪುರಾ ಕ್ಯಾಡರ್ನಿಂದ ಮಣಿಪುರ ಕ್ಯಾಡರ್ಗೆ ಮೂರು ವರ್ಷಗಳ ಅವಧಿಗೆ ನಿಯೋಜಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ನೇಮಕಾತಿ ಸಮಿತಿಯು ಅಂಗೀಕಾರ ನೀಡಿತು ಎಂದು ಆದೇಶ ತಿಳಿಸಿದೆ.

ಒಂದು ತಿಂಗಳಿನಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ರವಿವಾರ ಇನ್ನೊಂದು ಸುತ್ತಿನ ಹಿಂಸಾಚಾರ ಭುಗಿಲೆದ್ದಿದೆ. ಸುಮಾರು ಎರಡು ವಾರಗಳ ಕಾಲ ಶಾಂತಿಯಿಂದ ಇದ್ದ ರಾಜ್ಯದಲ್ಲಿ ರವಿವಾರ ಹಿಂಸೆ ಮತ್ತೊಮ್ಮೆ ಸ್ಫೋಟಿಸಿದೆ.

ಮೇ 3ರಂದು ಆರಂಭಗೊಂಡ ಹಿಂಸೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಈಗ 80ಕ್ಕೆ ಏರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಆಯೋಗದಿಂದ ತನಿಖೆ: ಶಾ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವೊಂದನ್ನು ಕೇಂದ್ರ ಸರಕಾರವು ರಚಿಸುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಇಂಫಾಲದಲ್ಲಿ ಘೋಷಿಸಿದ್ದಾರೆ.

ತನ್ನ ಮಣಿಪುರ ಪ್ರವಾಸದ ವೇಳೆ ಅವರು 22 ಮೇಟೈ ಮತ್ತು 25 ಕುಕಿ ಸಂಘಟನೆಗಳ ನಾಯಕರು ಮತ್ತು 11 ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗಿದ್ದಾರೆ ಹಾಗೂ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದಾರೆ.

‘‘ಕೇಂದ್ರ ಸರಕಾರವು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿಯೊಂದನ್ನೂ ರಚಿಸಲಿದೆ. ಸಮಿತಿಯಲ್ಲಿ ಕೈಗಾರಿಕೋದ್ಯಮಿಗಳು, ಕ್ರೀಡಾಪಟುಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹಲವರಿರುತ್ತಾರೆ’’ ಎಂದು ಅಮಿತ್ ಶಾ ತಿಳಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿ ಕುಲದೀಪ್ ಸಿಂಗ್ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳನ್ನೊಳಗೊಂಡ ಏಕೀಕೃತ ಕಮಾಂಡ್ ಒಂದನ್ನು ರಚಿಸಲಾಗುವುದು ಹಾಗೂ ಅದು ಯಾವುದೇ ತಾರತಮ್ಯವಿಲ್ಲದೆ ಹಿಂಸಾ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದು ಎಂದರು.

10 ಲಕ್ಷ ರೂ. ಪರಿಹಾರ ಘೋಷಣೆ

ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ವೆಚ್ಚವಾಗಿ 10 ಲಕ್ಷ ರೂ. ನೀಡಲಾಗುವುದು ಎಂದು ಅಮಿತ್ ಶಾ ಘೋಷಿಸಿದರು. ಗಾಯಗೊಂಡವರಿಗಾಗಿ ಮತ್ತು ಮನೆಗಳನ್ನು ಕಳೆದುಕೊಂಡವರಿಗಾಗಿ ಪರಿಹಾರವನ್ನು ಅವರು ಶುಕ್ರವಾರ ಘೋಷಿಸಲಿದ್ದಾರೆ.

ಪಡಿತರ ಆಹಾರ, ಔಷಧಿಗಳು ಮತ್ತು ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲು ಪ್ರತ್ಯೇಕ ಶಿಬಿರವೊಂದನ್ನು ಸ್ಥಾಪಿಸಲಾಗುವುದು ಎಂದರು.

‘‘ಗುಡ್ಡಗಾಡು ಪ್ರದೇಶಗಳಿಗೆ ಹೋಗಲು ಒಬ್ಬ ವ್ಯಕ್ತಿಗೆ 2,000 ರೂ. ದರದಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ನಾವು ಆರಂಭಿಸಲಿದ್ದೇವೆ. ಹೆಲಿಕಾಪ್ಟರ್ಗಳ ಮೂಲಕ ಜನರನ್ನು ವಿಮಾನ ನಿಲ್ದಾಣಗಳಿಗೆ ತಲುಪಿಸಲಾಗುವುದು. ರಾಜ್ಯದೊಳಗಿನ ಸಂಚಾರಕ್ಕಾಗಿಯೂ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗುವುದು’’ ಎಂದು ಅಮಿತ್ ಶಾ ನುಡಿದರು.

ಕುಕಿ ಬಂಡುಕೋರರೊಂದಿಗೆ ಗುಂಡಿನ ಕಾಳಗ: 3 ಪೊಲೀಸರಿಗೆ ಗಾಯ

ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶಂಕಿತ ಕುಕಿ ಬಂಡುಕೋರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕುಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಂಗ್ಜೆಂಗ್ ಎಂಬಲ್ಲಿ ಬುಧವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಇಂಫಾಲದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ.

‘‘ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆಯುತ್ತಿರುವುದು ಇಂಫಾಲ ಪೂರ್ವ ಜಿಲ್ಲೆಯ ಚನುಂಗ್ನಿಂದ ವರದಿಯಾಗಿದೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

Similar News