ಸುಡಾನ್: ಹಸಿವಿನಿಂದ ಬಳಲಿ 60 ಮಕ್ಕಳು ಮೃತ್ಯು, 2 ತಿಂಗಳಿಂದ ಅನಾಥಾಶ್ರಮದಲ್ಲಿದ್ದ ಶಿಶುಗಳು

Update: 2023-06-01 16:15 GMT

ಖಾರ್ಟಮ್: ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಕಳೆದ 2 ತಿಂಗಳಿಂದ ಮುಂದುವರಿದಿರುವ ಸಂಘರ್ಷದಿಂದಾಗಿ ಅನಾಥಾಶ್ರಮದಲ್ಲಿ ಕಳೆದ 6 ವಾರದಿಂದ ಅತಂತ್ರ ಸ್ಥಿತಿಯಲ್ಲಿದ್ದ ಶಿಶುಗಳ ಸಹಿತ 60 ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ರಾಜಧಾನಿ ಖಾರ್ಟಮ್ ನಲ್ಲಿರುವ ಅನಾಥಾಶ್ರಮದಲ್ಲಿ   ಕಳೆದ 6 ವಾರಗಳಿಂದ ಈ ಮಕ್ಕಳು ನೆಲೆಸಿದ್ದರು. ಸಂಘರ್ಷ ತೀವ್ರಗೊಂಡ ಬಳಿಕ  ಆಹಾರ ಲಭಿಸದೆ ಹಾಗೂ ಕೆಲ ದಿನಗಳಿಂದ ತೀವ್ರ ಜ್ವರದ ಕಾರಣ ಮಕ್ಕಳು ಸಾವನ್ನಪ್ಪಿದ್ದಾರೆ. ಕಳೆದ ವಾರಾಂತ್ಯದಲ್ಲಿ 2 ದಿನದ ಅಂತರದಲ್ಲಿ 26 ಮಕ್ಕಳು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮೂರು ತಿಂಗಳ ಶಿಶುಗಳೂ ಸೇರಿವೆ. ಸರಿಯಾದ ಆಹಾರ ಮತ್ತು ಆರೋಗ್ಯ ಸೇವೆ ಲಭಿಸದೆ ಈ ಸಾವು ಸಂಭವಿಸಿದೆ ಎಂದು ಅನಾಥಾಶ್ರಮದ ಸಿಬಂದಿಗಳನ್ನು  ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಖಾರ್ಟಮ್ ನ ಅಲ್-ಮೆಖೊಮ ಅನಾಥಾಲಯದಲ್ಲಿ ಬಿಳಿಯ ಬಟ್ಟೆಯಲ್ಲಿ ಸುತ್ತಿಡಲಾದ ಮಕ್ಕಳ ಮೃತದೇಹಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮತ್ತೊಂದು ವೀಡಿಯೊದಲ್ಲಿ ಹತ್ತಕ್ಕೂ ಹೆಚ್ಚು ಎಳೆಯ ಶಿಶುಗಳು ಕೋಣೆಯ ನೆಲದ ಮೇಲೆ ಕುಳಿತು ಹಸಿವಿನಿಂದ ಅಳುತ್ತಿರುವುದು, ಅಲ್ಲಿರುವ ಮಹಿಳೆ ಎರಡು ಜಗ್ಗಳಿಂದ ಶಿಶುಗಳಿಗೆ ನೀರು ಕುಡಿಸುತ್ತಿರುವ ದೃಶ್ಯವಿದೆ.

`ಇದೊಂದು ದುರಂತರ ಪರಿಸ್ಥಿತಿಯಾಗಿದೆ. ಕಳೆದ ವಾರ ಈ ಪ್ರದೇಶದಲ್ಲಿ ನಡೆದ ಭೀಕರ ಶೆಲ್ ದಾಳಿಯಿಂದ ಅನಾಥಾಶ್ರಮಕ್ಕೂ ಹಾನಿಯಾಗಿದ್ದು ಈ ಪ್ರದೇಶವಿಡೀ ದೂಳಿನಿಂದ ಮುಳುಗಿತ್ತು. ಪರಿಸರ ಮಾಲಿನ್ಯದಿಂದಾಗಿ ಎಳೆಯ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಮತ್ತೊಂದು ಕೋಣೆಗೆ ಸ್ಥಳಾಂತರಿಸಲಾಗಿದೆ. ಈ ಪರಿಸ್ಥಿತಿ ಬರಲಿದೆ ಎಂದು ಯುದ್ಧದ ಮೊದಲ ದಿನವೇ ನಿರೀಕ್ಷಿಸಿದ್ದೆವು. ಆದರೆ ಆಹಾರ, ನೀರು ಮತ್ತು ಔಷಧದ ಕೊರತೆಯಾಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಅಂತರಾಷ್ಟ್ರೀಯ ನೆರವನ್ನು ಒದಗಿಸಲೂ ಸಾಧ್ಯವಾಗದ ಪರಿಸ್ಥಿತಿ ಇಲ್ಲಿದೆ' ಎಂದು ಅನಾಥಾಲಯದ ಸಿಬಂದಿ ಉಮರ್ ಮುಸ್ತಾಫಾ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅನಾಥಾಶ್ರಮದ ವೀಡಿಯೊ ವೈರಲ್ ಆದ ಬಳಿಕ ಮೇ 28ರಂದು  ಸ್ಥಳೀಯ ಚಾರಿಟಿ ಸಂಸ್ಥೆಯೊಂದು ಯುನಿಸೆಫ್, ರೆಡ್‌ ಕ್ರಾಸ್‌ನ ನೆರವಿನಿಂದ ಆಹಾರ, ಮಕ್ಕಳಿಗೆ ಅಗತ್ಯವಿರುವ ವಸ್ತುಗಳು ಹಾಗೂ ಔಷಧಗಳನ್ನು ಪೂರೈಸಲು ಶಕ್ತವಾಗಿದೆ ಎಂದು ವರದಿ ಹೇಳಿದೆ.

ಆಹಾರ ಮತ್ತು ಔಷಧ ಪೂರೈಕೆ ಸಮಸ್ಯೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಶಿಶುಗಳು ಸಾವನ್ನಪ್ಪುವ ಸಾಧ್ಯತೆಯಿದೆ. ಆದ್ದರಿಂದ ಖಾರ್ಟಮ್ ಅನಾಥಾಶ್ರಮದಿಂದ ಮಕ್ಕಳನ್ನು ಕ್ಷಿಪ್ರವಾಗಿ ಸ್ಥಳಾಂತರಿಸುವಂತೆ ಅನಾಥಾಶ್ರಮದ ಸಿಬಂದಿಗಳು ಆಗ್ರಹಿಸಿದ್ದಾರೆ. ಸುಡಾನ್ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶದಾದ್ಯಂತ ಅರಾಜಕತೆ ನೆಲೆಸಿದ್ದು ಮನೆಗಳು, ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಸುಮಾರು 190 ಮಕ್ಕಳ ಸಹಿತ 860ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದು ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಸುಮಾರು 1.65 ದಶಲಕ್ಷ ಜನತೆ ದೇಶದಿಂದ ಪಲಾಯನ ಮಾಡಿದ್ದು ಅಂತರಾಷ್ಟ್ರೀಯ ನೆರವನ್ನು ಒದಗಿಸಲೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಸುಡಾನ್ನಲ್ಲಿ 13.6 ದಶಲಕ್ಷಕ್ಕೂ ಅಧಿಕ ಮಕ್ಕಳಿಗೆ  ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ಯುನಿಸೆಫ್ ವರದಿ ಮಾಡಿದೆ.

ಸುಡಾನ್ ಸೇನಾ ಮುಖ್ಯಸ್ಥರ ಆಗ್ರಹಕ್ಕೆ ವಿಶ್ವಸಂಸ್ಥೆ ನಕಾರ

ಸುಡಾನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ವೋಕರ್ ಪರ್ಥೆಸ್ರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಸುಡಾನ್ ಸೇನಾ ಮುಖ್ಯಸ್ಥರ ಆಗ್ರಹವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಬುಧವಾರ ತಳ್ಳಿಹಾಕಿದ್ದಾರೆ.

ಯುದ್ಧದಿಂದ ಜರ್ಝರಿತಗೊಂಡಿರುವ ಸುಡಾನ್ ನಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯ ಭವಿಷ್ಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಧರಿಸಲಿದೆ  ಎಂದವರು ಇದೇ ಸಂದರ್ಭ ಸ್ಪಷ್ಟಪಡಿಸಿದ್ದಾರೆ. ಸುಡಾನ್ನಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ, ಸುಡಾನ್ ನಲ್ಲಿ ವಿಶ್ವಸಂಸ್ಥೆಯ ಸಮಗ್ರ ಪರಿವರ್ತನೆ ನೆರವು ಕಾರ್ಯಕ್ರಮದ ಮುಖ್ಯಸ್ಥರಾಗಿರುವ ವೋಕರ್ ಪರ್ಥೆಸ್ ಪಕ್ಷಪಾತದಿಂದ ವರ್ತಿಸುತ್ತಿರುವ ಕಾರಣ ಅವರನ್ನು ತಕ್ಷಣ ವಾಪಾಸು ಕರೆಸಿಕೊಳ್ಳಬೇಕೆಂದು ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್ ಬರ್ಹಾನ್ ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಗುಟೆರಸ್ `ಸುಡಾನ್ ವಿಷಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತನ್ನದೇ ಆದ ಹೊಣೆಗಾರಿಕೆಯಿದೆ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ. ಸುಡಾನ್ ನಲ್ಲಿನ ನಿಯೋಗದ ಕಾರ್ಯಾಚರಣೆಯನ್ನು ಮತ್ತೊಂದು ಅವಧಿಗೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಭದ್ರತಾ ಮಂಡಳಿಯ ಜವಾಬ್ದಾರಿಯಾಗಿದೆ' ಎಂದಿದ್ದಾರೆ.

Similar News