ಕಾನೂನು ಪ್ರಕ್ರಿಯೆ ಅನುಸರಿಸಿದ ಬಳಿಕವೇ ಕ್ರೀಡಾಪಟುಗಳಿಗೆ ನ್ಯಾಯ ದೊರೆಯಲಿದೆ: ಅನುರಾಗ್ ಠಾಕೂರ್ ಭರವಸೆ

Update: 2023-06-02 17:30 GMT

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್‌ನ ನಿರ್ಗಮನ ವರಿಷ್ಠ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ದೊರೆಯಬೇಕೆಂದು ಪ್ರತಿಯೊಬ್ಬರೂ ಬಯಸುತ್ತಿದ್ದಾರೆ. ಆದರೆ, ಕಾನೂನಿನ ಪ್ರಕ್ರಿಯೆಯನ್ನು ಅನುಸರಿಸಿದ ಆನಂತರವಷ್ಟೇ ಅದು ಲಭ್ಯವಾಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ತಿಳಿಸಿದ್ದಾರೆ. ಬ್ರಿಜ್‌ಭೂಷಣ ವಿರುದ್ಧದ ಆರೋಪಗಳ ತನಿಖೆಯನ್ನು ನಿಷ್ಪಕ್ಷತವಾಗಿ ನಡೆಯಲಿದೆ ಎಂದು ಅವರು ಭರವಸೆ ನೀಡಿದರು.

ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಪ್ರತಿಭಟನೆ ನಡೆಸುತ್ತಿರುವ ದೇಶದ ಖ್ಯಾತಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾನದಿಯಲ್ಲಿ ವಿಸರ್ಜಿಸುವುದಾಗಿ ಬೆದರಿಕೆಯೊಡ್ಡಿದ ಕೆಲವೇ ದಿನಗಳ ಬಳಿಕ ಠಾಕೂರ್ ಈ ಹೇಳಿಕೆ ನೀಡಿದ್ದಾರೆ.

ಟೈಮ್ಸ್ ನೆಟ್‌ವರ್ಕ್ ಮಾಧ್ಯಮಸಂಸ್ಥೆಯು ಆಯೋಜಿಸಿದ ಇಂಡಿಯಾ ಇಕನಾಮಿಕ್ ಕಾನ್‌ಕ್ಲೇವ್ (ಭಾರತ ಆರ್ಥಿಕ ಸಮಾವೇಶ)ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘‘ಸರಕಾರವು ನಿಷ್ಪಕ್ಷಪಾತವಾದ ತನಿಖೆಗೆ ಒಲವನ್ನು ಹೊಂದಿದೆ. ನ್ಯಾಯ ದೊರೆಯಬೇಕೆಂದು ನಾವೆಲ್ಲರೂ ಬಯಸುತ್ತಿದ್ದೇವೆ. ಆದರೆ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿದ ಬಳಿಕವಷ್ಟೇ ಅದು ಸಾಧ್ಯವಾಗಲಿದೆ’’ ಎಂದು ಠಾಕೂರ್ ತಿಳಿಸಿದ್ದಾರೆ.

ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ದದ ಆರೋಪಗಳ ಬಗ್ಗೆ ಸರಕಾರಿ ನಿಯೋಜಿತ ಸಮಿತಿಯೊಂದು ವರದಿಯನ್ನು ಸಲ್ಲಿಸಿದ ಬಳಿಕ ದಿಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಬ್ರಿಜ್‌ಭೂಷಣ್ ಅವರು ಕೇಂದ್ರದ ಆಡಳಿತಾರೂಢ ಬಿಜೆಪಿಯ ಸಂಸದರಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ವಿಳಂಬವಾಗುತ್ತಿದೆಯೆಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು , ತನಿಖೆಯಲ್ಲಿ ಪಕ್ಷಪಾತ ನಡೆಸುವ ಪ್ರಶ್ನೆಯೇ ಇರುವುದಿಲ್ಲವೆಂದರು.

ಶೀಘ್ರದಲ್ಲೇ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದರು. ನಾವೆಲ್ಲರೂ ತ್ವರಿತ ವಿಚಾರಣೆಯ ಪರವಾಗಿದ್ದೇವೆಂದು ಸಚಿವರು ತಿಳಿಸಿದರು.

 ಕುಸ್ತಿಪಟುಗಳ ಪ್ರತಿಯೊಂದು ಬೇಡಿಕೆಗೂ ಸರಕಾರವು ಸಮ್ಮತಿಸಿದೆ. ಸಿಂಗ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿದೆ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ವ್ಯವಹಾರಗಳ ನಿರ್ವಹಣೆಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆ (ಐಓಎ)ಯು ಸಮಿತಿಯೊಂದನ್ನು ರಚಿಸಿದೆ.

‘‘ ಅಥ್ಲೀಟ್ ಆಗಿರಲಿ ಅಥವಾ ಮಹಿಳೆಯಾಗಿರಲಿ, ಒಂದು ವೇಲೆ ಅವರ ಮೇಲೆ ಯಾವುದೇ ದೌರ್ಜನ್ಯ ನಡೆದಲ್ಲಿ, ಅವರಿಗೆ ತ್ವರಿತವಾಗಿ ನ್ಯಾಯ ಸಿಗಬೇಕಾಗಿದೆ’’ ಎಂದು ಅನುರಾಗ್ ಠಾಕೂರ್ ಪ್ರತಿಪಾದಿಸಿದರು.

ಬ್ರಿಜ್‌ಭೂಷಣ್ ವಿರುದ್ಧದ ದೂರಿನಲ್ಲಿ ಕುಸ್ತಿಪಟುಗಳು ಪ್ರಸ್ತಾವಿಸಿರುವ ಘಟನೆಗಳು ಏಳು ವರ್ಷಗಳ ಹಿಂದೆ ನಡೆದಿವೆಯೆನ್ನಲಾದವು ಎಂದು ಸಚಿವರು ಹೇಳಿದರು.

ಬ್ರಿಜ್‌ಭೂಷಣ್ ಪ್ರಕರಣದಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬಹುದೆಂದು ಕುಸ್ತಿಪಟುಗಳಿಗೆ ಸೂಚಿಸಲಾಗಿತ್ತು. ಆದರೆ ಅವರು ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದರು ಎಂದು ಸಚಿವ ಠಾಕೂರ್ ಹೇಳಿದರು.

Similar News