ಹೋರಾಟಗಾರ್ತಿ ನವಶರಣ್‌ ಸಿಂಗ್‌ ಅವರ ಈಡಿ ವಿಚಾರಣೆಗೆ ಖಂಡನೆ

ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ 350ಕ್ಕೂ ಅಧಿಕ ಶಿಕ್ಷಣ ತಜ್ಞರು, ವಿದ್ವಾಂಸರು

Update: 2023-06-03 10:37 GMT

ಹೊಸದಿಲ್ಲಿ: ಸಂಶೋಧಕಿ, ಲೇಖಕಿ, ಹೋರಾಟಗಾರ್ತಿ ಡಾ. ನವಶರಣ್‌ ಸಿಂಗ್‌ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿರುವುದನ್ನು ಬಲವಾಗಿ ಖಂಡಿಸಿ 350ಕ್ಕೂ ಅಧಿಕ ಭಾರತೀಯ ಶಿಕ್ಷಣ ತಜ್ಞರು, ಸಂಶೋಧಕರು, ಕಾನೂನು ತಜ್ಞರು, ಕಲಾವಿದರು ಹಾಗೂ ನಾಗರಿಕ ಸಮಾಜ ಸದಸ್ಯರು ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿಯಲ್ಲಿ ಸಿಂಗ್‌ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಕಳುಹಿಸಿ ಮೇ 10ರಂದು ವಿಚಾರಣೆ ನಡೆಸಿತ್ತು. ಸಿಂಗ್‌ ಅವರು ರೈತರ ಪ್ರತಿಭಟನೆಗಳ ಸಕ್ರಿಯ ಬೆಂಬಲಿಗರಾಗಿದ್ದರು ಹಾಗೂ ಪ್ರತಿಭಟನೆಯನ್ನು ಪಾಲ್ಗೊಂಡಿದ್ದರು. ಖ್ಯಾತ ಹೋರಾಟಗಾರ ಹರ್ಷ್‌ ಮಂದರ್‌ ಅವರ ನೇತೃತ್ವದ ಅಮನ್‌ ಬಿರಾದಾರಿ ಎಂಬ ಟ್ರಸ್ಟಿನ ಆಡಳಿತ ಮಂಡಳಿಯಲ್ಲೂ ಅವರಿದ್ದಾರೆ.

“ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ತಜ್ಞರು ಹಾಗೂ ಮಾನವ ಹಕ್ಕು ಹೋರಾಟಗಾರರನ್ನು ತನಿಖೆ ನಡೆಸುವ ಪ್ರಶ್ನಿಸುವ ವಿದ್ಯಮಾನಗಳನ್ನು  ಇಡಿ ಮುಂದುವರಿಸಿಕೊಂಡು ಹೋಗಿರುವುದು ಡಾ ನವಶರಣ್‌ ಸಿಂಗ್‌ ಅವರ ವಿಸ್ತೃತ ವಿಚಾರಣೆಯಿಂದ ತಿಳಿದು ಬರುತ್ತದೆ. ಈ ರೀತಿಯ ಕ್ರಮಗಳಿಂದ ನಾಗರಿಕರ ಸಂವಿಧಾನಿಕ ಹಕ್ಕುಗಳು ಹಾಗೂ ರಾಜ್ಯದ ನೀತಿಗಳನ್ನು ವಿಮರ್ಶಿಸುವ ಅವರ ಹಕ್ಕುಗಳನ್ನು ಕಡಿತಗೊಳಿಸಲಾಗುತ್ತಿದೆ. ಈ ಅಕ್ರಮ ಹಣ ವರ್ಗಾವಣೆ ಕಾಯಿದೆಯು ಭಾರತೀಯ ಪ್ರಜಾಪ್ರಭುತ್ವದ ಕಪ್ಪು ಚುಕ್ಕೆ,” ಎದು ಹೇಳಿಕೆ ತಿಳಿಸಿದೆ.

“ಸಿಂಗ್‌ ಅವರು ಅತ್ಯುನ್ನತ ವಿದ್ವಾಂಸೆ ಹಾಗೂ ಕೃಷಿ, ಮಹಿಳಾ ಹಕ್ಕುಗಳು, ಕೃಷಿ ಕ್ಷೇತ್ರದ ಖ್ಯಾತ ಸಂಶೋಧಕಿ. ಆಕೆಯ ಕೆಲಸಗಳು ಬಡ ಕೃಷಿಕರ, ಅರಣ್ಯವಾಸಿಗಳ, ದಲಿತ ಮಹಿಳೆಯರ ಹಾಗೂ ದುರ್ಬಲ ವರ್ಗಗಳ ಸಮಸ್ಯೆಗಳತ್ತ ಬೆಳಕು ಚೆಲ್ಲಿವೆ,” ಎಂದು ಹೇಳಿಕೆ ತಿಳಿಸಿದೆಯಲ್ಲದೆ  ಸಂವಿಧಾನಿಕ ಮೌಲ್ಯಗಳು ಮತ್ತು ದುರ್ಬಲವರ್ಗಗಳ ಹಕ್ಕುಗಳನ್ನು ಎತ್ತಿ ಹಿಡಿಯಲು ಶ್ರಮಿಸುವ ನವಶರಣ್‌ ಸಿಂಗ್‌ ಮತ್ತು ಇತರರಿಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸರಕಾರ ಮತ್ತು ಜಾರಿ ಏಜನ್ಸಿಗಳು ಈ ರೀತಿ ಅನಗತ್ಯ ವಿಚಾರಣೆಯ ಮೂಲಕ ದೌರ್ಜನ್ಯವೆಸಗುವುದನ್ನು ನಿಲ್ಲಿಸಬೇಕು. ನಮ್ಮ ವಿದ್ವಾಂಸರು ದೇಶದ  ಹೆಮ್ಮೆ ಎಂದು ಹೇಳಿಕೆ ತಿಳಿಸಿದೆ.

Similar News