ಪರಿಸರ ಸ್ನೇಹಿ ಅಭಿವೃದ್ಧಿ ನಮ್ಮ ಹೊಣೆಗಾರಿಕೆ: ಡಾ.ಜೀವನ್ ರಾಜ್

Update: 2023-06-04 09:04 GMT

ಮಂಗಳೂರು, ಜೂ.4: ಪರಿಸರಸ್ನೇಹಿ ಅಭಿವೃದ್ಧಿಯಾಗುವತ್ತ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಯೆನೆಪೊಯ ಪದವಿ  ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜೀವನ ರಾಜ್ ಕುತ್ತಾರ್ ಹೇಳಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ಇಂದು ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ಹೊರಾಂಗಣದಲ್ಲಿ ರವಿವಾರ ಜರುಗಿದ ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪರಿಸರವನ್ನು ಕಾಪಾಡಬೇಕಾದ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಪರಿಸರವನ್ನೇ ಹಾಳು ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಗೆ. ಪರಿಸರ ನಾಶಗೊಂಡರೆ ಮಾನವ ಕುಲಕ್ಕೆ ಉಳಿಗಾಲವಿಲ್ಲ. ನೆಲ ಜಲ ಗಾಳಿ ಗಿಡ ಮರ ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪರಿಸರವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಮಾನವನ ಅಭಿವೃದ್ಧಿಯೂ ಆಗಬೇಕು ಗಿಡ ಮರ ಬೆಳೆಸಿ, ಪರಿಸರ ಉಳಿಸಬೇಕಾಗಿದೆ ಎಂದರು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಸಿರು ದಳದ ಸಂಯೋಜಕ  ನಾಗರಾಜ್ ಬಜಾಲ್ ಮಾತನಾಡಿ, ಐಷಾರಾಮಿ ಬದುಕಿನ ಹೆಸರಿನಲ್ಲಿ ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಯದಿದ್ದಲ್ಲಿ ಭವಿಷ್ಯದಲ್ಲಿ  ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ನಿಯಂತ್ರಣ ಮಾಡಬೇಕಾಗಿದೆ. ಎಳೆಯ ಪ್ರಾಯದ ಮಕ್ಕಳಲ್ಲಿ ಗಿಡಗಳನ್ನು ಬೆಳೆಸುವ ಮನೋಭಾವವನ್ನು ಹೆಚ್ಚೆಚ್ಚು ಮೂಡಿಸಬೇಕಾಗಿದೆ ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಣ್ಣರ ಚಾವಡಿ ಮಂಗಳೂರು ಸಂಚಾಲಕ ಸುನಿಲ್ ಕುಮಾರ್ ಬಜಾಲ್, 1973ರ ಜೂನ್ 5ರಂದು ಪ್ರಾರಂಭಗೊಂಡ ವಿಶ್ವ ಪರಿಸರ ದಿನಾಚರಣೆಗೆ ಇಂದು ಸುವರ್ಣ ಮಹೋತ್ಸವದ ಸಂಭ್ರಮವಾಗಿದೆ. ಕಳೆದ 50 ವರ್ಷಗಳಲ್ಲಿ ಜನತೆಯಲ್ಲಿ ಮೂಡಿಸಿದ ಪರಿಸರದ ಬಗೆಗಿನ ಕಾಳಜಿ ಹಾಗೂ ಮಹತ್ವವನ್ನು ಇನ್ನಷ್ಟು ಆಳವಾಗಿ ಜನ ಸಮೂಹದ ಮಧ್ಯೆ ಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಮಾಜಿಕ ಚಿಂತಕರಾದ ಶೋಭಾ ಕೇಶವ್ ಪಡೀಲ್, ದಿಶಾ ರೀಟಾ ಡಿಸೋಜ, ಪತ್ರಕರ್ತರಾದ ಆರಿಫ್ ಪಡುಬಿದ್ರಿ, ಯುವ ವಕೀಲರಾದ ರಾಮಚಂದ್ರ ಬಬ್ಬುಕಟ್ಟೆ, ಶರಿಲ್ ಅರುಣ್ ಬಂಗೇರ, ಯುವ ನಾಯಕರಾದ ಬಿ.ಕೆ.ಇಮ್ತಿಯಾಝ್, ನವೀನ್ ಕೊಂಚಾಡಿ, ಪೋಷಕರಾದ ಅಶ್ವಿನಿ, ನವಾಝ್, ಚಂದ್ರಕಲಾ, ರೇಖಾ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳಿಗೆ ಪರಿಸರದ ಬಗ್ಗೆ ಸ್ಥಳದಲ್ಲೇ ಆಶು ಭಾಷಣ ಸ್ಪರ್ಧೆ ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಸಿಗಳನ್ನು ವಿತರಿಸಲಾಯಿತು.

Similar News