ಸ್ಥಳೀಯರು ಸಹಕಾರ ನೀಡಿದರೆ ಭಟ್ಕಳದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಚಿಂತನೆ: ನೂತನ ಸಚಿವ ಮಾಂಕಾಳ್ ವೈದ್ಯ

Update: 2023-06-04 13:08 GMT

ಭಟ್ಕಳ: ಭಟ್ಕಳದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಮುಂದಾದಲ್ಲಿ ನಾನು ಎಲ್ಲ ರೀತಿಯ ಬೆಂಬಲ ನೀಡುತ್ತೇನೆ. ಸರ್ಕಾರವು ಸಹ ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು  ಮೀನುಗಾರಿಕಾ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು.

ಅವರು ರವಿವಾರ ನವಾಯತ್ ಕಾಲನಿಯಾ ಬಿಲಾಲ್ ಹಾಲ್ ನಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ನಾವು ಎಷ್ಟು ಮುನ್ನಡೆಯುತ್ತೇವೋ ಅಷ್ಟು ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗುತ್ತೇವೆ. ಶಿಕ್ಷಣದ ಸಾಮಾನ್ಯೀಕರಣದ ಬಗ್ಗೆ ನಾನು ಏನು ಯೋಚಿಸುತ್ತೇನೆ, ನೀವು ನನ್ನ ಆಲೋಚನೆ ಗಿಂತ ಬಹಳ ಮುಂದೆ ಹೋಗಿದ್ದೀರಿ, ನೀವು ಎಲ್‌ಕೆಜಿಯಿಂದ ಹಿಡಿದು ಹೈಸ್ಕೂಲ್, ಕಾಲೇಜುಗಳನ್ನು ಇಲ್ಲಿ ಸ್ಥಾಪಿಸಿದ್ದೀರಿ. ರಾಜ್ಯ ಪಠ್ಯಕ್ರಮ, ಕೇಂದ್ರೀಯ ಪಠ್ಯಕ್ರಮ, ಐಸಿಎಸ್‌ಇ, ಪದವಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಎಲ್ಲವನ್ನೂ ಇಲ್ಲಿ ಸ್ಥಾಪಿಸಿರುವುದು ನಿಮ್ಮಿಂದಲೇ, ಈಗ ಭಟ್ಕಳದಲ್ಲಿ ಒಂದೇ ಒಂದು ವೈದ್ಯಕೀಯ ಕಾಲೇಜು ಕಾಣೆಯಾಗಿದೆ. ಭಟ್ಕಳದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ನೀವು ಮುಂದಾಗಬೇಕೆಂದು ನಾನು ಬಯಸುತ್ತೇನೆ, ಇದಕ್ಕಾಗಿ ನಾನು ಎಲ್ಲ ರೀತಿಯ ಬೆಂಬಲವನ್ನು ನೀಡಲು ಸಿದ್ಧನಿದ್ದೇನೆ. ಸರ್ಕಾರದಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ.

ಭಟ್ಕಳದಲ್ಲಿ ನನ್ನ ಐತಿಹಾಸಿಕ ಗೆಲುವಿಗೆ ತಂಝೀಮ್ ಸಂಸ್ಥೆಯ ಸಹಾಯ, ಸಹಕಾರವೇ ಕಾರಣವಾಗಿದ್ದು ನೀವು ನೀಡಿದ ಅತಿಹೆಚ್ಚು ಮತಗಳು ನನ್ನನ್ನು ಸರ್ಕಾರದಲ್ಲಿ ಮಂತ್ರಿಯನ್ನಾಗಿಸಲು ಮಾನದಂಡವಾಯಿತು. ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ ಅದನ್ನು ಜನರಿಗೆ ತಲುಪಿಸುವುದು ನಿಮ್ಮೆಲ್ಲರ ಜವಾಬ್ದಾರಿ. ಅದರಲ್ಲಿ ವ್ಯತ್ಯಾಸಗಳೇನಾದರೂ ಕಂಡು ಬಂದಲ್ಲಿ ಅದನ್ನು ಸರಿಪಡಿಸುವ ಹೊಣೆಗಾರಿಕೆ ನನ್ನದು. ಇನ್ನೂ, ರಸ್ತೆ, ಕುಡಿಯುವ ನೀರು, ಮೂಲ ಸೌಕರ್ಯ ಎಲ್ಲವುಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ ಎಂದ ಅವರು, ನನ್ನ ಐತಿಹಾಸಿಕ ಗೆಲುವಿಗಾಗಿ ಇಲ್ಲಿನ ಸ್ಪೋರ್ಟ್ಸ್ ಸೆಂಟರ್ ಪದಾಧಿಕಾರಿ ಗಳು ಒಂದು ಪೈಸೆಯನ್ನು ನನ್ನಿಂದ ಬಯಸದೆ ನಿಸ್ವಾರ್ಥವಾಗಿ ಕೆಲಸ ಮಾಡಿದ್ದಾರೆ ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.

ನೀವು ನನ್ನ ಮೇಲೆ ತೋರಿದ ಪ್ರೀತಿ, ವಿಶ್ವಾಸಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ನಾನು ನಡೆದು ಕೊಳ್ಳುತ್ತೇನೆ. ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕುವಂತಾಗುವ ವಾತಾವರಣ ಖಂಡಿತ ಸೃಷ್ಟಿ ಯಾಗುತ್ತೆ. ಇದರಲ್ಲಿ ಯಾವುದೇ ವ್ಯತ್ಯಾಸ ಅಗದಂತೆ ನಾನು ನೋಡಿಕೊಳ್ಳುತ್ತೇನೆ. ಇದುವರೆಗೆ ಭಟ್ಕಳ ಎಂದರೆ ಬೇರೇನನ್ನೋ ಕಲ್ಲಿಸಿಕೊಳ್ಳುವವರಿಗೆ ಮುಂದಿನ ದಿನಗಳಲ್ಲಿ ಭಟ್ಕಳ ಅಂದರೆ, ಶಾಂತಿ, ಭಟ್ಕಳ ಅಂದರೆ, ಸೌಹಾರ್ದತೆ, ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ, ಮನುಷ್ಯತ್ವ, ಬ್ರಾತೃತ್ವ ಎಂದು ಕಲ್ಲಿಸಿಕೊಳ್ಳುವಂತಾಗಬೇಕು. ಅಂತಹ ವಾತಾವರಣ ಮುಂದಿನ ದಿನಗಳಲ್ಲಿ ಸೃಷ್ಟಿಯಾಗುತ್ತದೆ  ಎಂದು ಈ ಸಂದರ್ಭ ಭರವಸೆ ನೀಡಿದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರಮುಖ ಮುರ್ಡೇಶ್ವರ, ಮಂಕಿ, ತೆಂಗುಗುಂಡಿ, ಶಿರಾಲಿ ಸೇರಿದಂತೆ ಹಲವು ಮುಸ್ಲಿಂ ಜಮಾಅತ್ ಸೇರಿದಂತೆ ಸಂಘಟನೆ ಹಾಗೂ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್‌ನ ಪ್ರತಿನಿಧಿಗಳು ಮಾಂಕಾಳ್ ವೈದ್ಯ ಸಚಿವರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಹೂಮಾಲೆ ಹಾಕಿ ಅಭಿನಂದಿಸಿದರು.

ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರ.ಕಾ. ಅಬ್ದುಲ್ ರಕೀಬ್ ಎಂ.ಜೆ. ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸನಾವುಲ್ಲಾ ಗವಾಯಿ ಅಭಿನಂದನಾ ಪತ್ರ ವಾಚಿಸಿದರು.

ತಂಝೀಮ್ ರಾಜಕೀಯ ಸಮಿತಿ ಸಂಚಾಲಕ, ನ್ಯಾಯವಾದಿ ಸೈಯ್ಯದ್ ಇಮ್ರಾನ್ ಲಂಕಾ, ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರು, ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಮುಹಿದ್ದೀನ್ ರುಕ್ನುದ್ದೀನ್ ಇಕ್ಬಾಲ್ ಸಿಟಿ ಮೆಡಿಕಲ್, ಮುಅಲಿಂ ಮಹಮ್ಮದ್ ಹುಸೇನ್ ಕಲಗಾರ,  ಸೇರಿದಂತೆ ತಾಲೂಕಿನ ಸರ್ವ ಜಮಾಅತ್ ಅಧ್ಯಕ್ಷ ಉಪಾಧ್ಯಕ್ಷರು, ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Similar News