×
Ad

ಬೀದಿ ಹಾಡುಗಾರನಿಗೆ ಸಹಾಯವಾಗಲು ತಾನೇ ನಿಂತು ಹಾಡಿದ ಕೇರಳದ ಬಾಲಕಿ: ವೀಡಿಯೊ ವೈರಲ್‌

Update: 2023-06-05 00:09 IST

ಮಲಪ್ಪುರಂ: ಬೀದಿಯಲ್ಲಿ ಹಾಡುತ್ತಾ ಬಸವಳಿದಿದ್ದ ಮಹಿಳೆಗೆ ಸಹಾಯವಾಗಲು ತಾನೇ ಅವರ ಸ್ಥಾನದಲ್ಲಿ ಬೀದಿಯಲ್ಲಿ ನಿಂತು ಹಾಡು ಮುಂದುವರಿಸಿದ ಹತ್ತನೇ ತರಗತಿ ವಿದ್ಯಾರ್ಥಿನಿ ಸದ್ಯ ಸಾಮಾಜಿಕ ತಾಣದಾದ್ಯಂತ ಮಾತಾಗಿದ್ದಾರೆ. ಆಕೆಗೆ ವ್ಯಾಪಕ ಪ್ರಶಂಸೆ ಹರಿದು ಬಂದಿದೆ. ಕೇರಳದ ಸಚಿವೆ ವೀಣಾ ಜಾರ್ಜ್‌ ಕೂಡಾ ಬಾಲಕಿಯ ಕಾರ್ಯಕ್ಕೆ ಪ್ರಶಂಸಿಸಿದ್ದಾರೆ.

ಶಾಲೆ ಪ್ರಾರಂಭವಾಗುವುದಕ್ಕೆ ಮುಂಚೆ ಸಾಮಗ್ರಿಗಳನ್ನು ಕೊಳ್ಳಲೆಂದು ತನ್ನ ತಂದೆಯೊಂದಿಗೆ ಬಾಲಕಿ ಆದಿರಾ ಕೆ ಅನೀಶ್‌ ಪೇಟೆಗೆ ಬಂದಿದ್ದಳು. ಈ ವೇಳೆ ಮಹಿಳೆಯೋರ್ವರು ತನ್ನ ಅಂಧ ಪತಿ ಮತ್ತು ಮಗುವಿನೊಂದಿಗೆ ಬೀದಿಯಲ್ಲಿ ಹಾಡುತ್ತಿದುದ್ದನ್ನು ಕಂಡಿದ್ದಳು. 

"ನಾನು ನನ್ನ ತಂದೆಯೊಂದಿಗೆ ಹೊರಗೆ ತೆರಳಿದ್ದೆ. ಈ ವೇಳೆ ಮಹಿಳೆಯೋರ್ವರು ಬೀದಿಯಲ್ಲಿ ಹಾಡುವುದನ್ನು ಕಂಡಿದ್ದೆ. ಆ ಮಹಿಳೆ ಆಕೆಯ ಪಕ್ಕದಲ್ಲಿದ್ದ ಟೀಯನ್ನೂ ಕುಡಿಯದೇ ನಿರಂತರವಾಗಿ ಹಾಡುತ್ತಿದ್ದರು. ಕೂಡಲೇ ನಾನು ಆಕೆಯ ಬಳಿ ತೆರಳಿ, ನೀವು ಚಾ ಕುಡಿದು ಸ್ವಲ್ಪ ವಿಶ್ರಮಿಸಿಕೊಳ್ಳಿ, ನಾನು ಕೆಲವು ಹಾಡುಗಳನ್ನು ಹಾಡುತ್ತೇನೆಂದು" ಆದಿರಾ ಟಿವಿ ಚಾನೆಲ್‌ ಒಂದಕ್ಕೆ ಹೇಳಿಕೆ ನೀಡಿದ್ದಾರೆ.

ಮಲಪ್ಪುರಂನ ಉತ್ತರ ಕೇರಳ ಜಿಲ್ಲೆಯ ನಿಲಂಬೂರ್‌ನವರಾದ ಆದಿರಾ, ತಾನು ಚಿಕ್ಕವಳಿದ್ದಾಗ ಗಾಯನ ತರಗತಿಗಳನ್ನು ತೆಗೆದುಕೊಂಡಿದ್ದೇನೆ, ಆದರೆ ನಂತರ ಅದನ್ನು ನಿಲ್ಲಿಸಿದ್ದೇನೆ ಎಂದು ಹೇಳಿದರು.

ಆಕೆಯ ನಿಸ್ವಾರ್ಥ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆಕೆಗೆ ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ನಿಲಂಬೂರ್ ಪಟ್ಟಣದ ಜನನಿಬಿಡ ರಸ್ತೆಯ ಬದಿಯಲ್ಲಿ ಅವರು ಇಸ್ಲಾಮಿಕ್‌ ಹಾಡು 'ಲಾ ಇಲಾಹ ಇಲ್ಲಲ್ಲಾಹು' ಹಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೂಡ ಯುವತಿಗೆ ಕರೆ ಮಾಡಿ ಕೇರಳದ ಜಾತ್ಯತೀತತೆ ಮತ್ತು ಮಾನವೀಯತೆಯ ಮುಖವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ ಎಂದು ಸಚಿವರ ಕಚೇರಿಯ ಹೇಳಿಕೆ ತಿಳಿಸಿದೆ.

Full View

Similar News