ಕಟ್ಟಡ ತೆರಿಗೆ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯಿಂದ ಲಕ್ಷಾಂತರ ‌ರೂ. ಪಡೆದ ಬಿಜೆಪಿ ಪುರಸಭಾ ಸದಸ್ಯರು: ಶುಭದ ರಾವ್ ಆರೋಪ

Update: 2023-06-05 06:52 GMT

ಕಾರ್ಕಳ, ಜೂ.5: ಕಾರ್ಕಳ ಪುರಸಭಾ ವ್ಯಾಪ್ತಿಯ ಕಾಲೇಜು ಸಂಸ್ಥೆಯೊಂದರ ಕಟ್ಟಡಗಳಿಗೆ ತೆರಿಗೆ ನಿಗದಿ ಮಾಡಲು‌ ಬಿಜೆಪಿ ಪುರಸಭಾ ಸದಸ್ಯರು ಲಕ್ಷಾಂತರ ರೂಪಾಯಿ ಪಡೆದು ಭ್ರಷ್ಟಾಚಾರದ ಜೊತೆಗೆ ಪುರಸಭೆಗೆ ದ್ರೋಹ ಎಸಗಿದ್ದಾರೆ ಎಂದು ಪುರಸಭಾ ‌ಸದಸ್ಯ ಹಾಗೂ ಕಾಂಗ್ರೆಸ್ ‌ವಕ್ತಾರ ಶುಭದ ರಾವ್ ‌ಆರೋಪಿಸಿದ್ದಾರೆ.

ಕಾರ್ಕಳದ ಹೋಟೆಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾಸಂಸ್ಥೆಯ ಕಟ್ಟಡಕ್ಕೆ ತೆರಿಗೆ ಕಟ್ಟುವ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ 10 ಲಕ್ಷ ರೂ. ಪಡೆದು ಪುರಸಭೆಗೆ ಕೇವಲ 4,25,671 ರೂ. ತೆರಿಗೆ ಕಟ್ಟಿ ಪುರಸಭೆಗೆ ಮತ್ತು ಸಂಸ್ಥೆಗೆ ದ್ರೋಹ ಮಾಡಲಾಗಿದೆ. ಈ ಪ್ರಕರಣವು ಪುರಸಭೆಯ ದಾಖಲೆಗಳಿಂದ ಬಹಿರಂಗವಾಗಿದೆ ಎಂದು ತಿಳಿಸಿದರು.

ಈ ವಂಚನೆಗೆ ಸಂಬಂಧಿಸಿದ ದಾಖಲೆಗಳನ್ನು ಶಾಸಕರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುವುದು. ಶಾಸಕರಿಗೆ ನೈತಿಕತೆ ಇದ್ದರೆ ಈ ಬಗ್ಗೆ ಸ್ವತಃ ಅವರೇ ತನಿಖೆ ನಡೆಸಿ ತಪ್ಪಿತಸ್ಥ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಿ, ಸಂಸ್ಥೆಗೆ ಹಣ ಹಿಂದಿರುಗಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಶುಭದ ರಾವ್ ಒತ್ತಾಯಿಸಿದರು.

 ತಮ್ಮ ವಿಜಯೋತ್ಸವದ ಸಭೆಯಲ್ಲಿ ಶಾಸಕರು ಪುರಸಭೆಯ ಲೈಸೆನ್ಸ್ ಗಾಗಿ ಇನ್ನೂರು, ಮುನ್ನೂರು ರೂಪಾಯಿಗೆ ಕೈ ಚಾಚುವ ಚಿಲ್ಲರೆ ನಾಯಕ ಎಂದು ತನ್ನ ಮೇಲೆ ಆಧಾರ ರಹಿತ ಆರೋಪ ಮಾಡಿ ಅಪಮಾನ ಮಾಡಿದ್ದೀರಿ. ಇಂದು ನಿಮ್ಮದೇ ಪಕ್ಷದ ಸದಸ್ಯರ ಚಿಲ್ಲರೆ ಕೆಲಸವನ್ನು ದಾಖಲೆ ಸಹಿತ ಬಹಿರಂಗ ಪಡಿಸಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಇಲ್ಲವಾದರೆ ಕ್ಷೇತ್ರದ ಜನತೆ ನಿಮ್ಮನ್ನೆ ಚಿಲ್ಲರೆ ನಾಯಕ ಎಂದು ತಿಳಿದುಕೊಳ್ಳುವರು ಎಂದು ಸವಾಲು ಹಾಕಿದ್ದಾರೆ.

Similar News

ನಾಪತ್ತೆ