ಗೃಹಜ್ಯೋತಿಯಲ್ಲಿ ಬಾಡಿಗೆ ಮನೆಯವರಿಗೆ ಷರತ್ತು ಅಗತ್ಯ: ಗೃಹ ಸಚಿವ ಡಾ.ಪರಮೇಶ್ವರ್

Update: 2023-06-06 15:33 GMT

ಉಡುಪಿ : ಗೃಹಜ್ಯೋತಿ ಯೋಜನೆ ಸೇರಿದಂತೆ ಎಲ್ಲವನ್ನು ಕೂಡ ಸರಕಾರ ಸ್ಪಷ್ಟವಾಗಿ ಹೇಳಿದೆ. ಇದರಲ್ಲಿ ಬಿಜೆಪಿ ಗೊಂದಲ ಉಂಟು ಮಾಡುತ್ತಿದೆ. ಇಷ್ಟೇ ಹಣ ಖರ್ಚಾಗುತ್ತದೆ ಎಂಬುದನ್ನು ಗಮನಿಸಿ ಸ್ಪಷ್ಟ ತೀರ್ಮಾನ ಕೈಗೊಂಡಿದ್ದೇವೆ. ಬಿಪಿಎಲ್ ಮತ್ತು ಎಪಿಎಲ್ ಎಂಬ ಯಾವುದೇ ವರ್ಗೀಕರಣ ಮಾಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಎಲ್ಲ ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಜ್ಯೋತಿ ಲಭವನ್ನು ಬಾಡಿಗೆದಾರರಿಗೂ ನಾವು ಕೊಡಬೇಕು. ಆದರೆ ಅವರ  ಹೆಸರಿನಲ್ಲಿ ಮಾಲಕರಿಗೆ ಲಾಭ ಆಗುತ್ತದೆ. ಆ ಲಾಭ ಬಾಡಿಗೆದಾರರಿಗೆ ವರ್ಗಾವಣೆ ಆಗಲೇಬೇಕು. ಬೆನಿಫಿಟ್ ಆಫ್ ಡೌಟ್‌ನ ಲಾಭ ಬಾಡಿಗೆದಾರರಿಗೆ ಸಿಗಬೇಕು. ಈ ಸಮಸ್ಯೆಯನ್ನು ನಾವು ಸಾರ್ಟ್ ಔಟ್ ಮಾಡುತ್ತೇವೆ. ಈ ವಿಚಾರದಲ್ಲಿ ಕೆಲವೊಂದು ಷರತ್ತು ಹಾಕಲೇ ಬೇಕಾಗು ತ್ತದೆ. ಯಾರೋ ನಿನ್ನೆ ಬಾಡಿಗೆ ಬಂದು ಇವತ್ತು ವಿನಾಯಿತಿ ಕೇಳಿದರೆ ಆಗುತ್ತದೆಯೇ? ಒಂದು ಹಂತದ ಮಾರ್ಜಿನಲ್ ಕಂಡೀಶನ್ ಇರುತ್ತದೆ ಎಂದರು.  

ಬಡ ಜನರನ್ನು ಸಬಲೀಕರಣಗೊಳಿಸಬೇಕೆಂಬ ಉದ್ದೇಶದಿಂದ ಯೋಜನೆ ಜಾರಿ ಮಾಡಿದ್ದೇವೆ. ಅದರಲ್ಲಿ ಒಂದಿಷ್ಟು ಆಚೀಚೆಯಾದರೆ ಬೊಬ್ಬೆ ಹೊಡೆದರೆ ನಾವೇನು ಮಾಡುವುದು. ಬೊಬ್ಬೆ ಹೊಡೆದುಕೊಳ್ಳಿ ಬಿಡಿ. ಬಿಜೆಪಿಯವರು ಈ ಯೋಜನೆ ಮಾಡುವುದು ಬೇಡ ಎಂದು ಹೇಳಲಿ. ಸುಳ್ಳು ಹೇಳಿಕೊಂಡು ಬಂದವರು ಈಗ ಅನುಭವಿಸುತ್ತಿದ್ದಾರೆ.

ಚಕ್ರವರ್ತಿ ಸೂಲಿಬೆಲೆಯನ್ನು ಜೈಲಿಗಟ್ಟುವ ಎಂಬಿ ಪಾಟೀಲ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ಪ್ರಶ್ನೆಗಳಿಗೆ ತಕ್ಕ ಉತ್ತರ ಎಂಬಿ ಪಾಟೀಲ್ ಅವರೇ ಕೊಡುತ್ತಾರೆ. ಆಮೇಲೆ ಗೃಹ ಇಲಾಖೆ ಆ ಬಗ್ಗೆ ಯೋಚನೆ ಮಾಡುತ್ತದೆ. ಬಿಜೆಪಿ ಮಾಡಿದ ಎಲ್ಲಾ ಆರೋಪಕ್ಕೆ ಉತ್ತರ ಕೊಡಲು ಆಗುವು ದಿಲ್ಲ. ಬಿಜೆಪಿಯ ಒಬ್ಬ ಕಾರ್ಯಕರ್ತ ಹೇಳಿದರೆ ನಾನು ಉತ್ತರ ಕೊಡಬೇಕಾ? ಜವಾಬ್ದಾರಿಯಿಂದ ಯಾವುದಾದರೂ ಒಂದು ವಿಚಾರ ಅಥವಾ ಘಟನೆ ಮೇಲೆ ಆರೋಪ ಮಾಡಿದರೆ ಉತ್ತರ ಕೊಡಬಹುದು ಎಂದು ತಿಳಿಸಿದರು.

ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ಹೆಲ್ಪ್‌ಡೆಸ್ಕ್ ರಚಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡಲು ಹೆಲ್ಪ್‌ಡೆಸ್ಕ್ ಮಾಡಿರಬಹುದು. ಅವರಿಗೆ ಒಳ್ಳೆಯದಾಗುವುದಾದರೆ ತಪ್ಪಲ್ಲ, ಮಾಡಬಹುದು.  ಅದು ಬಿಜೆಪಿಯ ಆಂತರಿಕ ವಿಚಾರವಾಗಿದೆ. ಮುಂದೆ ಕಾಂಗ್ರೆಸ್ ಕೂಡ ತನ್ನ ಕಾರ್ಯಕರ್ತರ ರಕ್ಷಣೆಗೆ ಇದೇ ರೀತಿ ಮಾಡಬಹುದು ಎಂದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಒಟ್ಟಾಗಿ ಎದುರಿಸುತ್ತಾರೆ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅದು ಎರಡೂ ಪಕ್ಷಗಳ ವಿವೇಚನೆಗೆ ಬಿಟ್ಟಿರುವುದು. ಅದು ಆ ಪಕ್ಷಗಳ ತೀರ್ಮಾನ. ಅದನ್ನು ನಾವು ಪ್ರಶ್ನೆ ಮಾಡುವಂತಿಲ್ಲ ಎಂದರು. ಗೋಹತ್ಯೆ ಸಂಬಂಧ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿಯಾಗಿ ನನ್ನನ್ನು ನೇಮಕ ಮಾಡಿರುವ ವಿಚಾರ ಫೇಕ್ ಸುದ್ದಿ ಎಂದು ಅವರು ತಿಳಿಸಿದರು. 

Similar News