ದೇಶಾದ್ಯಂತ ಜಾಲ ಹೊಂದಿರುವ ಮಾದಕವಸ್ತು ಪೂರೈಕೆ ಗ್ಯಾಂಗ್ ಪತ್ತೆ: 6 ಮಂದಿ ಬಂಧನ; 15,000 LSD ಬ್ಲಾಟ್ ವಶ

Update: 2023-06-06 16:41 GMT

ಹೊಸದಿಲ್ಲಿ: ಡಾರ್ಕ್ ವೆಬ್‌ ನಲ್ಲಿ ಕಾರ್ಯಾಚರಿಸುತ್ತಿರುವ ಹಾಗೂ ದೇಶಾದ್ಯಂತ ಜಾಲ ಹೊಂದಿರುವ ಮಾದಕ ವಸ್ತು ಪೂರೈಕೆ ತಂಡವೊಂದನ್ನು ಪತ್ತೆಹಚ್ಚಿರುವುದಾಗಿ ಮಾದಕವಸ್ತು ನಿಯಂತ್ರಣ ಸಂಸ್ಥೆ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಮಂಗಳವಾರ ಹೇಳಿದೆ. ಈ ಸಂಬಂಧ ಆರು ಮಂದಿಯನ್ನು ವಿವಿಧ ನಗರಗಳಿಂದ ಬಂಧಿಸಲಾಗಿದೆ ಹಾಗೂ 15,000 ಎಲ್‌ಎಸ್‌ಡಿ ಬ್ಲಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿಯೂ ಅದು ತಿಳಿಸಿದೆ. ಬಂಧಿತರು ವಿದ್ಯಾರ್ಥಿಗಳು ಮತ್ತು ಯುವಜನರು.

ಎಲ್‌ಎಸ್‌ಡಿ ಎಂದರೆ ಲಿಸರ್ಜಿಕ್ ಆ್ಯಸಿಡ್ ಡೈಇತೈಲ್ಅಮೈಡ್. ಇದು ರಾಸಾಯನಿಕಗಳಿಂದ ಮಾಡುವ ಮಾದಕವಸ್ತು ಪದಾರ್ಥವಾಗಿದೆ. ಡಾರ್ಕ್‌ನೆಟ್ಎಂದರೆ ಕಾನೂನು ಅನುಷ್ಠಾನ ಸಂಸ್ಥೆಗಳ ನಿಗಾಕ್ಕೆ ಸಿಗದ ಗುಪ್ತ ಖಾಸಗಿ ಇಂಟರ್ನೆಟ್ ಜಾಲವಾಗಿದೆ.

ಇದು ದೇಶದಲ್ಲಿ ಒಂದು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಅತ್ಯಧಿಕ ಪ್ರಮಾಣದ ಎಲ್‌ಎಸ್‌ಡಿ ಬ್ಲಾಟ್‌ಗಳಾಗಿವೆ ಎಂದು ಎನ್ಸಿಬಿ ಉಪ ಮಹಾನಿರ್ದೇಶಕ (ಉತ್ತರ ವಲಯ) ಜ್ಞಾನೇಶ್ವರ್ ಸಿಂಗ್ ಹೇಳಿದರು.

ಈವರೆಗೆ ಒಂದು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಅತ್ಯಧಿಕ ಎಲ್‌ಎಸ್‌ಡಿ ಎಂದರೆ 5,000 ಬ್ಲಾಟ್‌ಗಳು. ಅವುಗಳನ್ನು ಕರ್ನಾಟಕ ಪೊಲೀಸರು 2021ರಲ್ಲಿ ಮತ್ತು ಕೋಲ್ಕತ ಎನ್ಎಸ್ಬಿ 2022ರಲ್ಲಿ ವಶಪಡಿಸಿಕೊಂಡಿದ್ದರು. ಎಲ್‌ಎಸ್‌ಡಿ ಬಳಕೆಯು ತರುಣರಲ್ಲಿ ವ್ಯಾಪಕವಾಗಿದೆ. ಇದರ ಬಳಕೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಸಿಂಗ್ ಹೇಳಿದ್ದಾರೆ.         

0.1ಗ್ರಾಮ್ ಎಲ್‌ಎಸ್‌ಡಿಯನ್ನು ಹೊಂದುವುದು ಮಾದಕವಸ್ತು ಮತ್ತು ಮತ್ತುಕಾರಕ ಪದಾರ್ಥಗಳ (ಎನ್‌ಡಿಪಿಎಸ್‌) ಕಾಯ್ದೆಯಡಿ ಅಪರಾಧವಾಗುತ್ತದೆ ಎಂದು ಎನ್ಸಿಬಿ ಅಧಿಕಾರಿ ಹೇಳಿದರು.

ತಂಡದ ರೂವಾರಿಯನ್ನು ಜೈಪುರದಿಂದ ಬಂಧಿಸಲಾಗಿದೆ. ಮಾದಕವಸ್ತುಗಳ ಬಗ್ಗೆ ತಂಡವು ಡಾರ್ಕ್ ನೆಟ್ ನಲ್ಲಿ ಜಾಹೀರಾತುಗಳನ್ನು ನೀಡುತ್ತದೆ ಎನ್ನುವುದನ್ನು ವಿಚಾರಣೆಯ ವೇಳೆ ಮಾದಕವಸ್ತು ನಿಯಂತ್ರಣ ಸಂಸ್ಥೆ ಕಂಡುಕೊಂಡಿದೆ. ಮಂಗಳವಾರ ವಶಪಡಿಸಿಕೊಳ್ಳಲಾದ 15,000 ಎಲ್ಎಸ್ಡಿ ಬ್ಲಾಟ್ ಗಳ ಬೆಲೆ ಸುಮಾರು 10.50 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇದು ಹೇಗೆ ಕಾರ್ಯಾಚರಿಸುತ್ತದೆ?

ಮಾದಕವಸ್ತು ವಿತರಣಾ ತಂಡದ ಪ್ರತಿನಿಧಿಯೊಬ್ಬ ಇನ್ಸ್ಟಾಗ್ರಾಮ್ನಲ್ಲಿ ಜನರನ್ನು ಸಂಪರ್ಕಿಸಿ, ಮಾದಕವಸ್ತು ಬೇಕಾ ಎಂದು ಕೇಳುತ್ತಾನೆ. ಜನರು ಆಸಕ್ತಿ ವ್ಯಕ್ತಪಡಿಸಿದರೆ, ಬಳಿಕ ಸಂಭಾಷಣೆಯು ಖಾಸಗಿ ಮೆಸೇಜಿಂಗ್ ಆ್ಯಪ್ ‘ವಿಕರ್ ಮೀ’ ವರ್ಗಾವಣೆಯಾಗುತ್ತದೆ. ಬಳಿಕ ಹಣವನ್ನು ಕ್ರಿಪ್ಟೊಕರೆನ್ಸಿಯಲ್ಲಿ ಪಾವತಿಸಲಾಗುತ್ತದೆ. ಬಳಿಕ ತಂಡದ ಒಬ್ಬ ಪ್ರತಿನಿಧಿ ಮಾದಕವಸ್ತುವನ್ನು ಗ್ರಾಹಕರಿಗೆ ತಲುಪಿಸುತ್ತಾನೆ.

ಎಲ್ಎಸ್ಡಿಯನ್ನು ಮುಖ್ಯವಾಗಿ ನೆದರ್ಲ್ಯಾಂಡ್ಸ್ ಅಥವಾ ಪೋಲ್ಯಾಂಡ್ನಿಂದ ಆಮದು ಮಾಡಿಕೊಳ್ಳಲಾಗುತ್ತದೆ.

Similar News