ಕಾಂಗ್ರೆಸ್ ನಂಟು ತೊರೆಯಲಿರುವ ಸಚಿನ್ ಪೈಲಟ್: ಜೂ.11ರಂದು ನೂತನ ಪಕ್ಷ ಘೋಷಣೆಯ ಸಾಧ್ಯತೆ

Update: 2023-06-06 16:57 GMT

ಜೈಪುರ: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಕಾಂಗ್ರೆಸ್ನೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡು ತನ್ನದೇ ಮಾರ್ಗದಲ್ಲಿ ಸಾಗಲು ಸಿದ್ಧರಾಗಿರುವಂತಿದೆ. ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಜೊತೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಪೈಲಟ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ತನ್ನದೇ ಆದ ಹೊಸ ಪಕ್ಷವೊಂದನ್ನು ಸ್ಥಾಪಿಸಲು ಸನ್ನದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ.

ನೂತನ ಪಕ್ಷ ಸ್ಥಾಪನೆ ಪ್ರಕ್ರಿಯೆಯಲ್ಲಿ ಪ್ರಶಾಂತ ಕಿಶೋರ ಅವರ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಪೈಲಟ್ ಗೆ ನೆರವಾಗುತ್ತಿದೆ ಎನ್ನಲಾಗಿದೆ. ವಸುಂಧರಾ ರಾಜೇ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯ ಭ್ರಷ್ಟಾಚಾರ ಆರೋಪಗಳ ಕುರಿತು ಗೆಹ್ಲೋಟ್ ಸರಕಾರದಿಂದ ಕ್ರಮಕ್ಕೆ ಆಗ್ರಹಿಸಿ ಪೈಲಟ್ ಎ.11ರಂದು ಕೈಗೊಂಡಿದ್ದ ಒಂದು ದಿನದ ಉಪವಾಷ ಮುಷ್ಕರವನ್ನು ಯೋಜಿಸಲು ಐ-ಪಿಎಸಿಯ ಸ್ವಯಂಸೇವಕರು ನೆರವಾಗಿದ್ದರು ಎಂದು ನಂಬಲಾಗಿದೆ.

ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿಷಯದಲ್ಲಿ ಕ್ರಮಕ್ಕೆ ಒತ್ತಡ ಹೇರಲು ಪೈಲಟ್ ಅಜ್ಮೇರ್ ನಿಂದ ಜೈಪುರಕ್ಕೆ ಕೈಗೊಂಡಿದ್ದ ಐದು ದಿನಗಳ ಪಾದಯಾತ್ರೆಯನ್ನು ರೂಪಿಸುವಲ್ಲಿಯೂ ಐ-ಪಿಎಸಿ ಪ್ರಮುಖ ಪಾತ್ರವನ್ನು ವಹಿಸಿತ್ತು ಎನ್ನಲಾಗಿದೆ.

ತನ್ನ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯಾದ ಜೂ.11ರಂದು ಪೈಲಟ್ ನೂತನ ಪಕ್ಷ ಸ್ಥಾಪನೆಯನ್ನು ಘೋಷಿಸಲಿದ್ದಾರೆ ಎಂಬ ತೀವ್ರ ಊಹಾಪೋಹಗಳೆದ್ದಿವೆ. ಅವರು ತನ್ನ ನೂತನ ಪಕ್ಷವನ್ನು ‘ಪ್ರಗತಿಶೀಲ ಕಾಂಗ್ರೆಸ್ ’ಎಂದು ಹೆಸರಿಸಬಹುದು ಎನ್ನಲಾಗಿದೆ.

Similar News