ಇರಾನಿನಿಂದ ಹೈಪರ್ಸಾನಿಕ್ ಕ್ಷಿಪಣಿ ‘ಫತಾಹ್’ ಅನಾವರಣ: ಶಬ್ದಕ್ಕಿಂತ 15 ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ

ಇರಾನ್ ಸೇನೆಯ ಬತ್ತಳಿಕೆಗೆ 1400 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ

Update: 2023-06-06 17:37 GMT

ದುಬೈ,ಜೂ.6:  ಶಬ್ದಕ್ಕಿಂತ 15 ಪಟ್ಟು ವೇಗದಲ್ಲಿ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಹೈಪರ್ಸಾನಿಕ್ ಕ್ಷಿಪಣಿಯನ್ನು ತಾನು ನಿರ್ಮಿಸಿರುವುದಾಗಿ ಇರಾನ್ ಮಂಗಳವಾರ ತಿಳಿಸಿದೆ. ತನ್ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಸಂಬಂಧಿಸಿ ಅಮೆರಿಕದ ಜೊತೆ ಉದ್ವಿಗ್ನತೆ ಉಲ್ಬಣಗೊಂಡಿರುವ ಸಂದರ್ಭದಲ್ಲೇ ಇರಾನ್ ತನ್ನ ಸೇನಾ ಬತ್ತಳಿಕೆಗೆ  ಹೈಪರ್ಸಾನಿಕ್ ಕ್ಷಿಪಣಿಗೆ ಸೇರ್ಪಡೆಗೊಳಿಸಿದೆ.

ಫತಾಹ್ (ಫಾರ್ಸಿ ಭಾಷೆಯಲ್ಲಿ  ವಿಜಯಶಾಲಿ ಎಂದರ್ಥ) ಹೆಸರಿನ ಈ ಕ್ಷಿಪಣಿಯನ್ನು  ಮಂಗಳವಾರ ಟೆಹರಾನ್ ನಲ್ಲಿ  ನಡೆದ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಳಿಸಿತು. 

ಕಾರ್ಯಕ್ರಮದಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹೀಂ ರಾಯಿಸಿ  ಅವರು ‘‘  ಈ ಕ್ಷಿಪಣಿಯಿಂದಾಗಿ, (ಶತ್ರುಗಳನ್ನು) ಹಿಮ್ಮೆಟ್ಟಿಸುವ ಶಕ್ತಿಯನ್ನು ರೂಪಿಸಿಕೊಂಡಂತಹ ಭಾವನೆ ನಮಗೆ ಬಂದಿದೆ.  ಈ ಶಕ್ತಿಯು, ಈ ಪ್ರಾಂತದಲ್ಲಿರುವ ರಾಷ್ಟ್ರಗಳಿಗೆ ಶಾಶ್ವತ ಭದ್ರತೆ ಹಾಗೂ ಶಾಂತಿಯ   ಲಂಗರು ಆಗಲಿದೆ’’ ಎಂದರು.
 
ಇರಾನ್ ನ ಅರೆಸೈನಿಕ ರೆವೆಲ್ಯೂಶನರಿ ಗಾರ್ಡ್ಸನ   ವೈಮಾನಿಕ ಕಾರ್ಯಕ್ರಮದ ವರಿಷ್ಠ ಜ. ಅಮಿರ್ ಅಲಿ ಹಾಜಿಝದೇಹ್ ಅವರು ಕ್ಷಿಪಣಿಯ ಮಾದರಿಯನ್ನು  ಅನಾವರಣಗೊಳಿಸಿದರು. ಈ ಕ್ಷಿಪಣಿಯು 1400 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆಯೆಂದು ಹಾಜಿಝದೆಹ್ ತಿಳಿಸಿದರು.ಆದರೂ, ‘ಫತಾಹ್’ ಸೂಪರ್ಸಾನಿಕ್ ಕ್ಷಿಪಣಿಯ ಯಶಸ್ವಿ ಪ್ರಾಯೋಗಿಕ ಪರೀಕ್ಷೆಯ ಛಾಯಾಚಿತ್ರಗಳನ್ನು ಇರಾನ್ ಸೇನಾಧಿಕಾರಿಗಳು  ಇನ್ನೂ ಬಿಡುಗಡೆಗೊಳಿಸಿಲ್ಲವೆಂದು ತಿಳಿದುಬಂದಿದೆ.

ಪರಮಾಣು ಕಾರ್ಯಕ್ರಮವನ್ನು ಇರಾನ್ ಹಮ್ಮಿಕೊಂಡಿರುವುದರ ವಿರುದ್ಧ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಹೇರಿದ್ದರಿಂದ, ಆ ದೇಶವು ಅತ್ಯಾಧುನಿಕ  ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ನಿಷೇಧ ವಿಧಿಸಿದ್ದವು.  ಈ ಹಿನ್ನೆಲೆಯಲ್ಲಿ ಇರಾನ್ಗೆ ತನ್ನ ಪ್ರಕ್ಷೇಪಕ ಕ್ಷಿಪಣಿ ವ್ಯವಸ್ಥೆಯನ್ನು  ಹಲವು ವರ್ಷಗಳಿಂದ ಸ್ವದೇಶಿಯವಾಗಿ ಅಭಿವೃದ್ಧಿಪಡಿಸುತ್ತಲೇ ಬಂದಿದೆ ಎಂದು ಮೂಲಗಳು ತಿಳಿಸಿವೆ.

Similar News