ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ವೈಫಲ್ಯ ಕಾರಣವಲ್ಲ: ತನಿಖಾಧಿಕಾರಿ

Update: 2023-06-07 02:30 GMT

ಹೊಸದಿಲ್ಲಿ: ಒಡಿಶಾ ತ್ರಿವಳಿ ರೈಲು ದುರಂತದ ಕಾರಣಗಳ ಬಗ್ಗೆ ರೈಲ್ವೆ ಇಲಾಖೆಯ ವಿವಿಧ ವಿಭಾಗಗಳ ನಡುವೆ ಭಿನ್ನಾಭಿಪ್ರಾಯವಿದ್ದು, ಜಂಟಿ ತಪಾಸಣಾ ವರದಿಗೆ ಸಹಿ ಮಾಡಿದ ಹಿರಿಯ ರೈಲ್ವೆ ಎಂಜಿನಿಯರ್ ಒಬ್ಬರು ವರದಿಯ ಅಂಶಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸುವ ಟಿಪ್ಪಣಿ ದಾಖಲಿಸಿದ್ದಾರೆ. ಸಿಗ್ನಲ್ ವೈಫಲ್ಯ ದುರಂತಕ್ಕೆ ಕಾರಣ ಎಂದು ತಪಾಸಣಾ ವರದಿ ದೂರಿದೆ. ಆದರೆ ಇದನ್ನು ನಿರಾಕರಿಸಿರುವ ಅಧಿಕಾರಿ, ಡಾಟಾಲಾಗರ್ ವರದಿಯನ್ನು ಉಲ್ಲೇಖಿಸಿ ಕೋರಮಂಡಲ ಎಕ್ಸ್‍ಪ್ರೆಸ್ ರೈಲು ಮುಖ್ಯ ಹಳಿಯಲ್ಲಿ ಚಲಿಸಲು ಹಸಿರು ಸಿಗ್ನಲ್ ನೀಡಲಾಗಿತ್ತೇ ವಿನಃ ಲೂಪ್ ಲೈನ್‍ನಲ್ಲಿ ಚಲಿಸಲು ಸಿಗ್ನಲ್ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತನಿಖೆಯ ಪ್ರಾಥಮಿಕ ಹಂತದಲ್ಲಿ ಭಿನ್ನ ದೃಷ್ಟಿಕೋನಗಳು ಇರುವುದರಿಂದ ವಿವಿಧ ವಿಭಾಗಗಳ ನಡುವೆ ಇಂಥ ಭಿನ್ನ ಅಭಿಪ್ರಾಯಗಳು ಸಾಮಾನ್ಯ ಎಂದು ರೈಲ್ವೆ ಸಚಿವಾಲಯ ಸಮುಜಾಯಿಷಿ ನೀಡಿದೆ. ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಿ ವರದಿ ನೀಡುವ ವರೆಗೂ ಅಂತಿಮ ನಿರ್ಧಾರಕ್ಕೆ ಕಾಯಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಡಾಟಾಲಾಗರ್ ಎನ್ನುವುದು ಮೈಕ್ರೊಪ್ರೊಸೆಸರ್ ಆಧರಿತ ವ್ಯವಸ್ಥೆಯಾಗಿದ್ದು, ಇದು ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಯ ಮೇಲೆ ನಿಗಾ ಇಡುತ್ತದೆ. ಇದು ಈ ಮಾಹಿತಿಯನ್ನು ಸ್ಕ್ಯಾನ್ ಮಾಡಿ, ಸಂಗ್ರಹಿಸಿ ಇಟ್ಟು ಸಂಸ್ಕರಿಸುತ್ತದೆ. ಇದನ್ನು ವರದಿ ತಯಾರಿಸಲು ಬಳಸಲಾಗುತ್ತದೆ.

ಬಲಸೋರ್‍ನ ಸಿಗ್ನಲ್ ಹಾಗೂ ಸಂಪರ್ಕ ವಿಭಾಗದ ಹಿರಿಯ ಸೆಕ್ಷನ್ ಎಂಜಿನಿಯರ್ ಎ.ಕೆ.ಮಹಾಂತ, ತನಿಖಾ ತಂಡದಲ್ಲಿದ್ದ ಇತರ ನಾಲ್ಕು ಮಂದಿಯ ಅಭಿಪ್ರಾಯವನ್ನು ವಿರೋಧಿಸಿ ಒಂದು ಪುಟದ ಟಿಪ್ಪಣಿ ದಾಖಲಿಸಿದ್ದಾರೆ. ಕೋರಮಂಡಲ ಎಕ್ಸ್‍ಪ್ರೆಸ್ ರೈಲಿನ ಚಾಲಕನಿಗೆ ಲೂಪ್‍ಲೈನ್‍ನಲ್ಲಿ ತೆರಳಲು ಸಿಗ್ನಲ್ ನೀಡಿದ್ದರಿಂದ ಅದು ಸ್ಟೇಷನರಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು ಎಂದು ವರದಿಯಲ್ಲಿ ಹೇಳಲಾಗಿದೆ.

Similar News