ನಾವು ಕುಸ್ತಿಪಟುಗಳಿಗೆ ನೀಡುತ್ತಿರುವ ಬೆಂಬಲ ಹಿಂತೆಗೆದುಕೊಂಡಿಲ್ಲ: ರಾಕೇಶ್ ಟಿಕಾಯತ್

Update: 2023-06-07 05:00 GMT

ಹೊಸದಿಲ್ಲಿ: ಕುಸ್ತಿಪಟುಗಳಿಗೆ ನೀಡುತ್ತಿರುವ ಬೆಂಬಲವನ್ನುನಾವು  ಹಿಂತೆಗೆದುಕೊಂಡಿಲ್ಲ.  ಕುಸ್ತಿಪಟುಗಳ  ಕೋರಿಕೆಯ ಮೇರೆಗೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜೂನ್ 9 ರ ನಿಗದಿಪಡಿಸಿದ್ದ ಪ್ರತಿಭಟನೆಯನ್ನು  ಮುಂದೂಡಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರು ಮಂಗಳವಾರ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯ ಬಗ್ಗೆ ಕುಸ್ತಿಪಟುಗಳು ತಮ್ಮನ್ನು  ಕತ್ತಲೆಯಲ್ಲಿಟ್ಟಿದ್ದಕ್ಕಾಗಿ ರೈತ ಮುಖಂಡರು ಅಸಮಾಧಾನಗೊಂಡಿರುವ ಕಾರಣ ಅವರು ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು.

ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಶನಿವಾರ ರಾತ್ರಿ ಅಮಿತ್ ಶಾ  ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ತಿಳಿಸಿದ್ದರು.

ಆದರೂ ಕುಸ್ತಿಪಟುಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

"ಜೂನ್ 9 ರಂದು ದಿಲ್ಲಿಯಲ್ಲಿ ನಡೆಯಲಿರುವ ನಮ್ಮ ಪ್ರತಿಭಟನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಸರಕಾರಿ ಅಧಿಕಾರಿಗಳು ಮತ್ತು ಪ್ರತಿಭಟನಾ ನಿರತ ಕುಸ್ತಿಪಟುಗಳ ನಡುವಿನ ಸಭೆಯ ಫಲಿತಾಂಶಕ್ಕಾಗಿ ನಾವು ಕಾಯುತ್ತೇವೆ. ನಾವು (ರೈತರ ಸಂಘ) ಕುಸ್ತಿಪಟುಗಳ ಬೆಂಬಲಕ್ಕಿದ್ದೇವೆ ಹಾಗೂ  ಅವರಿಗೆ ನಮ್ಮ ಬೆಂಬಲ ಮುಂದುವರಿಯುತ್ತದೆ'' ಎಂದು ಟಿಕಾಯತ್  ಪಿಟಿಐಗೆ ತಿಳಿಸಿದರು.

Similar News