ಉಕ್ರೇನ್ ಅಣೆಕಟ್ಟು ಸ್ಫೋಟದಿಂದ ಘೋರ ಪರಿಣಾಮ : ವಿಶ್ವಸಂಸ್ಥೆ ಎಚ್ಚರಿಕೆ

24 ಗ್ರಾಮಗಳು ಜಲಾವೃತ; 42,000 ಜನರು ಅಪಾಯದಲ್ಲಿ

Update: 2023-06-07 17:08 GMT

ವಿಶ್ವಸಂಸ್ಥೆ, ಜೂ.7: ದಕ್ಷಿಣ ಉಕ್ರೇನ್ನಲ್ಲಿ ಬೃಹತ್ ಅಣೆಕಟ್ಟು ಸ್ಫೋಟದಿಂದ ಘೋರ ಪರಿಣಾಮದ ಭೀತಿಯಿದ್ದು 42,000ಕ್ಕೂ ಅಧಿಕ ಜನರು ಪ್ರವಾಹದ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಕಳವಳ ವ್ಯಕ್ತಪಡಿಸಿದೆ.

ಯುದ್ಧಗ್ರಸ್ತ ದಕ್ಷಿಣ ಉಕ್ರೇನ್ನಲ್ಲಿ ರಶ್ಯದ ನಿಯಂತ್ರಣದಲ್ಲಿರುವ ಪ್ರದೇಶದ ಪ್ರಮುಖ ಅಣೆಕಟ್ಟು ಹಾಗೂ ಜಲವಿದ್ಯುತ್ ಸ್ಥಾವರ ಮಂಗಳವಾರ ಸ್ಫೋಟಗೊಂಡಿದ್ದು ಸ್ಥಾವರದಿಂದ ಪ್ರವಾಹೋಪಾದಿಯಲ್ಲಿ ನೀರು ಹೊರಹರಿಯುತ್ತಿದ್ದು ಈ ಪ್ರದೇಶದ ತಗ್ಗುಪ್ರದೇಶಗಳಲ್ಲಿರುವ ಮನೆ, ಕಟ್ಟಡಗಳು ನೀರಿನಲ್ಲಿ ಮುಳುಗಿವೆ. ಈ ಕೃತ್ಯಕ್ಕೆ ರಶ್ಯ ಹಾಗೂ ಉಕ್ರೇನ್ ಪರಸ್ಪರರನ್ನು ದೂಷಿಸುತ್ತಿವೆ. ಈ ಬಗ್ಗೆ ಚರ್ಚಿಸಲು ಮಂಗಳವಾರ ರಾತ್ರಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ನಡೆದಿದೆ. ಅಣೆಕಟ್ಟು ಸ್ಫೋಟದಿಂದ ಎರಡೂ ರಾಷ್ಟ್ರಗಳ ಸಾವಿರಾರು ಮಂದಿ ಸಮಸ್ಯೆಗೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರ ಮತ್ತು ತುರ್ತು ನೆರವು ವಿಭಾಗದ ಸಂಯೋಜಕ ಮಾರ್ಟಿನ್ ಗ್ರಿಫಿತ್ಸ್ ‘ಅಣೆಕಟ್ಟು ಒಡೆದಿರುವುದರಿಂದ ಮನೆಗಳು, ಆಹಾರ, ಸುರಕ್ಷಿತ ನೀರು ಮತ್ತು ಜೀವನೋಪಾಯದ ನಷ್ಟದ ಮೂಲಕ  ದಕ್ಷಿಣ ಉಕ್ರೇನ್ನ ಸಾವಿರಾರು ಜನರು ಹಾಗೂ ಯುದ್ಧರಂಗದ ಮುಂಚೂಣಿಯಲ್ಲಿರುವ ಎರಡೂ ದೇಶಗಳ ಪಡೆಗಳು ಗಂಭೀರ ಮತ್ತು ದೂರಗಾಮಿ ಪರಿಣಾಮಕ್ಕೆ ಒಳಗಾಗಲಿದ್ದಾರೆ. ದುರಂತದ ಪ್ರಮಾಣದ ವ್ಯಾಪಕತೆ ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ಬೆಳಕಿಗೆ ಬರಲಿದೆ’ ಎಂದರು.

ಇದುವರೆಗೆ ಯಾವುದೇ ಸಾವು ವರದಿಯಾಗಿಲ್ಲ, ಆದರೆ ಪ್ರವಾಹದಿಂದಾಗಿ ಹಲವರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿಯ ಸಂಯೋಜಕ ಜಾನ್ ಕಿರ್ಬಿ ಹೇಳಿದ್ದಾರೆ.

ಈ ಮಧ್ಯೆ, ಉಕ್ರೇನ್ ಗಡಿಭಾಗದಲ್ಲಿರುವ ನಿಪ್ರೊ ನದಿಯಲ್ಲಿ ನೀರಿನ ಪ್ರಮಾಣ ಒಂದೇಸಮನೆ ಹೆಚ್ಚುತ್ತಿರುವುದರಿಂದ ನದಿಪ್ರದೇಶದಲ್ಲಿರುವ ಖೆರ್ಸಾನ್ ಪ್ರಾಂತದ ಜನರು ಎತ್ತರದ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಸುಮಾರು 17 ಸಾವಿರ ಮಂದಿಯನ್ನು ಸ್ಥಳಾಂತರಗೊಳಿಸಿದ್ದು 24 ಗ್ರಾಮಗಳು ನೀರಿನಲ್ಲಿ ಮುಳುಗಿವೆ. 40 ಸಾವಿರಕ್ಕೂ ಅಧಿಕ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ರಶ್ಯ ನಿಯಂತ್ರಣದ ಪ್ರದೇಶದಲ್ಲಿರುವ 25,000 ಜನರನ್ನು ಸ್ಥಳಾಂತರಗೊಳಿಸುವುದು ಸವಾಲಿನ ಕಾರ್ಯವಾಗಿದೆ ಎಂದು ಉಕ್ರೇನ್ನ ಪ್ರಾಸಿಕ್ಯೂಟರ್ ಜನರಲ್ ಆಂಡ್ರಿಯ್ ಕೋಸ್ಟಿನ್ ಹೇಳಿದ್ದಾರೆ.

ರಶ್ಯದ ಮೇಲೆ ಆಪಾದನೆ ಹೊರಿಸಲು ಉಕ್ರೇನ್ ಸೇನೆ ನಡೆಸಿದ ಉದ್ದೇಶಪೂರ್ವಕ ಕೃತ್ಯವಿದು ಎಂದು ರಶ್ಯ ಆರೋಪಿಸಿದೆ. ಅಣೆಕಟ್ಟು ಸ್ಫೋಟದ ಮೂಲಕ ರಶ್ಯವು ಸಾಮೂಹಿಕ ವಿನಾಶದ ಪರಿಸರ ಬಾಂಬ್ ಉದುರಿಸಿದೆ ಎಂದು ಉಕ್ರೇನ್ ದೂರಿದೆ. ಯುರೋಪಿಯನ್ ಯೂನಿಯನ್, ನೇಟೊ, ಬ್ರಿಟನ್ ದೇಶಗಳು ರಶ್ಯವನ್ನು ದೂಷಿಸಿದರೆ, ಇದು ಯಾರ ಕೃತ್ಯ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ತನ್ನದೇ ಜನರ ವಿರುದ್ಧ ಉಕ್ರೇನ್ ಇಂತಹ ಕೃತ್ಯ ನಡೆಸುವ ಸಾಧ್ಯತೆ ಕಡಿಮೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.

►ಸೋವಿಯತ್ ಯುಗದ ಅಣೆಕಟ್ಟು

ಸೋವಿಯತ್ ಒಕ್ಕೂಟದ ಯುಗದಲ್ಲಿ 1950ರಲ್ಲಿ ನಿಪ್ರೊ ನದಿಗೆ ಕಟ್ಟಲಾಗಿರುವ ಕಖೋವ್ಕ ಅಣೆಕಟ್ಟು, 150 ಕಿ.ಮೀ ದೂರದಲ್ಲಿರುವ (ಈಗ ರಶ್ಯದ ನಿಯಂತ್ರಣದಲ್ಲಿರುವ) ಉಕ್ರೇನ್ಗೆ ಸೇರಿದ ಝಪೋರಿಝಿಯಾ ಅಣುವಿದ್ಯುತ್ ಸ್ಥಾವರವನ್ನು ತಂಪಾಗಿಡಲು ನೀರನ್ನು ಪೂರೈಸುತ್ತದೆ. ಅಣುಸ್ಥಾವರದಲ್ಲಿರುವ ನೀರಿನ ಕೊಳದ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಕ್ಷಣಕ್ಕೆ ಝಪೋರಿಝಿಯಾ ಅಣುಸ್ಥಾವರದ ಭದ್ರತೆಗೆ ಯಾವುದೇ ಬೆದರಿಕೆಯಿಲ್ಲ ಎಂದು ಈ ಸ್ಥಾವರದ ಭದ್ರತೆಗೆ ರಶ್ಯ ನಿಯೋಜಿಸಿರುವ ಅಧಿಕಾರಿ ಯೂರಿ ಚೆರ್ನಿಚುಕ್ ಹೇಳಿದ್ದಾರೆ.

Similar News