ಅಸಾಧ್ಯವೆಂಬುದು ಒಂದು ಮನಃಸ್ಥಿತಿಯಷ್ಟೇ: ಪ್ರೊ. ರೊನಾಲ್ಡ್ ಪಿಂಟೊ

‘ಕ್ಯಾಂಪಸ್‌ನಿಂದ ಕಾರ್ಪೊರೇಟ್ ಜಗತ್ತಿನೆಡೆಗೆ ಒಂದು ಪಯಣ’ ವಿಶೇಷ ಉಪನ್ಯಾಸ

Update: 2023-06-07 17:26 GMT

ಮಂಗಳೂರು, ಜೂ.7: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಹಿಂದಿ, ಇತಿಹಾಸ ಮತ್ತು ಪುರಾತತ್ವ ವಿಭಾಗಗಳು, ಐಕ್ಯೂಎಸಿ ಹಾಗೂ ರೋಟರಿ ಕ್ಲಬ್ ಮಂಗಳೂರು ಸನ್‌ ರೈಸ್  ಸಹಯೋಗದೊಂದಿಗೆ ‘ಕ್ಯಾಂಪಸ್‌ನಿಂದ ಕಾರ್ಪೊರೇಟ್ ಜಗತ್ತಿನೆಡೆಗೆ ಒಂದು ಪಯಣ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಇಂಡಿವಿಜುವಲ್ ಡೆವೆಲಪ್ಮೆಂಟ್ ನ ನಿರ್ದೇಶಕ ಪ್ರೊ. ರೊನಾಲ್ಡ್ ಪಿಂಟೋ ಮಾತನಾಡಿ, ಅಸಾಧ್ಯವೆಂಬುದು ಯಾವುದೂ ಇಲ್ಲ. ಎಂತಹ ವಿಷಮ ಪರಿಸ್ಥಿತಿಯಲ್ಲೂ ದೃಢ ಮನಸ್ಥಿತಿ ಮತ್ತು ಯೋಜಿತ ಕಾರ್ಯವಿಧಾನದ ಮೂಲಕ ಯಶಸ್ಸು ಸಾಧಿಸಬಹುದು, ಎಂದರು. ಸಿವಿ ಸಿದ್ಧಪಡಿಸುವಿಕೆ, ಸಂದರ್ಶನಕ್ಕೆ ಬೇಕಾದ ಸಿದ್ಧತೆ- ಎದುರಿಸುವ ವಿಧಾನ, ಉದ್ಯೋಗಾವ ಕಾಶಗಳು ಮೊದಲಾದವುಗಳ ಕುರಿತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವರು ಮಾಹಿತಿ ನೀಡಿದರು.

ರೋಟರಿ ಕ್ಲಬ್ ಮಂಗಳೂರು ಸನ್‌ರೈಸ್  ಅಧ್ಯಕ್ಷ ಪ್ರೊ. ಚನ್ನಗಿರಿ ಗೌಡ, ಜ್ಞಾನವೃದ್ಧಿಗೆ ವ್ಯಕ್ತಿ, ವಸ್ತು ಅಥವಾ ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ವಿಧಾನ. ವೃತ್ತ ಪತ್ರಿಕೆಗಳನ್ನು ಓದುವುದು, ದಿನಕ್ಕೊಂದು ಗಂಟೆ ಟಿವಿಯಲ್ಲಿ ಸುದ್ದಿ ನೋಡುವುದು, ಅಂತರ್‌ ರಾಷ್ಟ್ರೀಯ ಚಾನಲ್‌ಗಳನ್ನು ಗಮನಿಸಿದರೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣವಾಗುವುದು ಕಷ್ಟವಲ್ಲ. ಆದರೆ ಮೊಬೈಲ್‌ನಲ್ಲಿ ಸಮಯ ಕಳೆಯುವುದನ್ನು ಬಿಡಿ, ಎಂದು ಅವರು ಕಿವಿಮಾತು ಹೇಳಿದರು.

ರೋಟರಿ ಕ್ಲಬ್‌ನ  ಖಜಾಂಜಿ, ಬೋನ್  ಮಸಾಲಾ ಸಂಸ್ಥೆಯ ಸ್ಥಾಪಕ ಜೋಸೆಫ್ ಡಿ’ಸಿಲ್ವಾ, ಪದವಿ ಎಂಬುದು ಪ್ರಯಾಣಕ್ಕೆ ಬಸ್ ಸಿಕ್ಕಿದಂತೆ. ಸೀಟ್ ಪಡೆದುಕೊಳ್ಳುವುದು ನಮ್ಮ ಸಾಮರ್ಥ್ಯಕ್ಕೆ ಬಿಟ್ಟಿರುತ್ತದೆ. ಪದವಿ ಮುಗಿಸಿದ ಬಳಿಕ ಆತ್ಮಾವಲೋಕನ ಮಾಡಿಕೊಂಡು, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಭವಿಷ್ಯ ರೂಪಿಸಿಕೊಳ್ಳುವುದು ಮುಖ್ಯ, ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ನಮ್ಮಲ್ಲಿ ವಿಶೇಷ ಅರ್ಹತೆ ಇಲ್ಲದಿದ್ದರೆ ಸ್ಪರ್ಧೆ ಎದುರಿಸುವುದು ಈಗ ಸುಲಭವಲ್ಲ, ಎಂದರು.

ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಡಾ. ಲಕ್ಷ್ಮ್ಮಣ್  ಸ್ವಾಗತಿಸಿದರು.  ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಬಿ ಎಂ ರಾಮಕೃಷ್ಣ ಧನ್ಯವಾದ ಸಮರ್ಪಿಸಿದರು. ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಡಾ. ಮೀನಾಕ್ಷಿ ಎಂ. ಎಂ, ಹಿಂದಿ ವಿಭಾಗದ ಡಾ. ನಾಗರತ್ನ ಎನ್ ರಾವ್, ಐಕ್ಯೂಎಸಿ ಸಂಯೋಜಕ ಡಾ. ಸಿದ್ಧರಾಜು ಎಂ ಎನ್, ರೋಟರಿ ಕಬ್‌ನ ಮಾಜಿ ಅಧ್ಯಕ್ಷ ವಾಲ್ಟರ್ ಮೆನೆಜಸ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭೂಮಿಕಾ ಎಂ.ಡಿ ಕಾರ್ಯಕ್ರಮ ನಿರೂಪಿಸಿದರು.

Similar News